ಗ್ರಾಹಕರ ಹಕ್ಕು, ಜವಾಬ್ದಾರಿಗಳ ಕುರಿತು ಜನಜಾಗೃತಿ ಅತ್ಯಗತ್ಯ


ಗದಗ,ಮಾ.28: ಗ್ರಾಹಕರಿಗೆ ಅವರ ಹಕ್ಕು ಮತ್ತು ಜವಾಬ್ದಾರಿಗಳ ಕುರಿತು ಜನಜಾಗೃತಿ ಮೂಡಿಸುವುದು ವಿಶ್ವ ಗ್ರಾಹಕರ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ, ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ “ ಗ್ರಾಹಕರಿಗಾಗಿ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ” ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ವಿಶ್ವ ಗ್ರಾಹಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಗುರುಪ್ರಸಾದ ಅವರು ಮಾತನಾಡಿ 1962 ರ ಮಾರ್ಚ 15 ರಂದು ಅಮೆರಿಕಾದ ಸಂಸತ್ ನಲ್ಲಿ ಅಧ್ಯಕ್ಷರಾದ ಜಾನ್ ಕೆನಡಿಯವರು ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಸಾಪ ಮಾಡಿದರು. 1986 ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂದಿತು. 2019 ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಹೊಸದಾಗಿ ಅಧಿನಿಯಮಗೊಳಿಸಲಾಯಿತು. ಮಹಾತ್ಮಾ ಗಾಂಧೀಜಿಯವರು ಗ್ರಾಹಕರೇ ದೇವರೆಂಬ ಮಾತು ಹೇಳಿದ್ದಾರೆ. ಗ್ರಾಹಕರಿಗೆ ವಸ್ತುಗಳನ್ನು ಖರೀದಿಸುವಾಗ ಆಯ್ಕೆ ಮಾಡುವ ಹಕ್ಕು, ಅವುಗಳ ಗುಣಮಟ್ಟಗಳ ಕುರಿತು ತಿಳಿಯುವ ಹಕ್ಕು ಹಾಗೂ ಒಂದು ವೇಳೆ ಮೋಸ ಹೋದರೆ ಪರಿಹಾರ ಪಡೆಯುವ ಹಕ್ಕು ಕೂಡ ಇರುತ್ತದೆ. ಈ ಹಕ್ಕುಗಳ ಕುರಿತು ಗ್ರಾಹಕರು ತಿಳುವಳಿಕೆ ಹೊಂದಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ರಾಜು ನಾಮದೇವ ಮೇತ್ರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಐ. ಹಿರೇಮನಿ ಪಾಟೀಲ, ಎಲ್.ಪಿ.ಜಿ ವ್ಯವಸ್ಥಾಪಕರು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್.ಬಿ. ಪೂಜಾರಿ, ವಿವಿಧ ಇಲಾಖೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಕಾರರು, ಪದವಿ ಪೂರ್ವ ಮತ್ತು ಪದವಿ ವ್ಯಾಸಂಗ ವಿದ್ಯಾರ್ಥಿಗಳು ಹಾಜರಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಡಾ.ಹಂಪಣ್ಣ ಸಜ್ಜನ ಸ್ವಾಗತಿಸಿದರು. ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜೇಂದ್ರ ಗಡಾದ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.