ಗ್ರಾಹಕರ ಹಕ್ಕುಗಳ ಅರಿವು ಅಗತ್ಯ : ಜಿಲ್ಲಾಧಿಕಾರಿ

ಬಾಗಲಕೋಟೆ, ಮಾ 22 : ಗ್ರಾಹಕ ಒಂದಲ್ಲ ಒಂದು ರೀತಿಯಲ್ಲಿ ವಸ್ತುಗಳ ಖರೀದಿಯಲ್ಲಿ ಮೋಸ ಹೋಗುತ್ತಿದ್ದು, ಮೋಸ ಹೋದಾಗ ಪ್ರಶ್ನಿಸುವ ಮನೋಭಾವ ಹೊಂದಬೇಕಾದರೆ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾ ಪಂಚಾಯತಿಯ ನೂತನ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಪ್ರಚಾರ ಇಲಾಖೆ, ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಾದವರು ಯಾವುದೇ ವಸ್ತುಗಳನ್ನು ಖರೀದಿಸುವ ಮೊದಲು ವಸ್ತುವಿನ ಗುಣಮಟ್ಟ ಹಾಗೂ ಮೇಲೆ ನಮೂದಿಸಿದ ದಿನಾಂಕ ಗಮನಸಿವುದರ ಜೊತೆಗೆ ಕಡ್ಡಾಯವಾಗಿ ರಸೀದಿ ಪಡೆಯುವುದು ಅವಶ್ಯಕವಾಗಿದೆ. ಖರೀದಿಸಿದ ವಸ್ತುವಿಗೆ ರಸೀದಿ ಪಡೆದಲ್ಲಿ ಮಾತ್ರ ಖರೀದಿಯಲ್ಲಿ ಮೋಸ ಹೋದಲ್ಲಿ ಪ್ರಶ್ನಿಸುವ ಹಕ್ಕು ಪಡೆಯುವಿರಿ. ಸ್ಥಳೀಯವಾಗಿ ಪ್ಯಾಕ್ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಅಲ್ಲದೇ ರುಚಿಕರವಾದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಶಾರದಾ ಕೆ. ಮಾತನಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಬೇಕಾಗಿದೆ. ಮಾರುಕಟ್ಟೆ ಮತ್ತು ಗ್ರಾಹಕ ಎಂದರೆ ಕೇವಲ ತೂಕ, ಕಲಬೆರಿಕೆ, ಬೆಲೆ ಹೆಚ್ಚಳ, ವಸ್ತುಗಳನ್ನು ಕೊಂಡುಕೊಳ್ಳುವುದು ಅಷ್ಟೆ ಅಲ್ಲದೆ ಅದರಲ್ಲಿ ಇನ್ಸುರೆನ್ಸ್, ಮೆಡಿಕಲ್, ಕಟ್ಟಡದ ನ್ಯೂನ್ಯತೆ, ಕೊರಿಯರ್ ಸೇವೆ ಹೀಗೆ ಅನೇಕ ಸೇವೆಗಳು ಇದರಲ್ಲಿ ಇದ್ದು ಅದರ ಬಗ್ಗೆ ತಿಳಿದುಕೊಳ್ಳುವಂತೆ ಸಲಹೆ ನೀಡಿದರು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ನ್ಯಾಯಾವಾದಿ ಅರುಣಾ ರಘುವೀರ ಮಾತನಾಡಿ ನಾವು ಬಳಸುವ ಪ್ಲಾಸ್ಟಿಕ್‍ನಿಂದ ಮಣ್ಣು, ನೀರು ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಮರು ಬಳಕೆಗೆ ಯೋಗ್ಯವಿರುವ ವಸ್ತುಗಳನ್ನು ಮಾತ್ರ ಹೆಚ್ಚಾಗಿ ಬಳಸುವುದು ಸೂಕ್ತ ಎಂದರು. ಹೂಸ ಗ್ರಾಹಕ ಕಾಯ್ದೆ-2019 ಅನ್ವಯ ಗ್ರಾಹಕ ಕಾಯ್ದೆಗಳಲ್ಲಿ ಬದಲಾವಣೆಯಾಗಿದ್ದು, ಗ್ರಾಹಕರ ರಕ್ಷಣೆಯೇ ಮುಖ್ಯ ಕರ್ತವ್ಯ. ಇ-ಕಾಮರ್ಸ ಟ್ರಾಂಜೆಕ್ಷನ್‍ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆನ್‍ಲೈನ್ ಮೂಲಕ ವಸ್ತುಗಳನ್ನು ಖರೀದಿಸುವಾಗ ಉಂಟಾಗುವ ತೊಂದರೆ ಕುರಿತಾಗಿ ಗ್ರಾಹಕರು ಎಲ್ಲಂದರಲ್ಲಿ ಬೇಕಾದರು, ವಿಡಿಯೋ ಕಾನ್ಫರೆನ್ಸ್ ಮೂಲಕ ದೂರು ದಾಖಲಿಸುವ ಹಕ್ಕನ್ನು ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಗ್ರಾಹಕರ ಹಕ್ಕುಗಳ ಕುರಿತಾದ ಕಿರು ನಾಟಕವನ್ನು ಪ್ರದರ್ಶನೆ ನಡೆಯಿತು. ಗ್ರಾಹಕರ ಹಕ್ಕುಗಳ ಕುರಿತಾದ ಹಮ್ಮಿಕೊಂಡ ವಿವಿಧ ಅರಿವು ಕಾರ್ಯಕ್ರಮ, ಬೀದಿನಾಟಕ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಂಗನಗೌಡ ದಂಡಣ್ಣವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಹಕರ ಜಾಗೃತಿಗಾಗಿ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಿಂದ ಹಮ್ಮಿಕೊಂಡ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿತ್ತು.