ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಎಚ್ಚರಿಕೆ ವಹಿಸಬೇಕು:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ: ಡಿ.29: ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಗುಣಮಟ್ಟ ಪರಿಕ್ಷಿಸಿಯೇ ಖರೀದಿಸಬೇಕು ಅಂದಾಗ ಮಾತ್ರ ಗ್ರಾಹಕರು ಮೋಸ ಹೋಗುವ ಸಾಧ್ಯತೆಗಳು ಕಡಿಮೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಗುರುವಾರ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ – 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರು ವಸ್ತುಗಳನ್ನು ಎಚ್ಚರಿಕೆಯಿಂದ ಖರೀದಿಸದಿದ್ದರೆ ಗುಣಮಟ್ಟ ಅಥವಾ ತೂಕದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಒಂದು ವೇಳೆ ಮೋಸ ಹೋದರೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ನ್ಯಾಯವನ್ನು ಪಡೆಯಬೇಕೆಂದರು.
ಗಾಂಧೀಜಿಯವರು ಗ್ರಾಹಕರನ್ನು ದೇವರೆಂದು ಹೇಳಿದ್ದರು. ಗ್ರಾಹಕರು ಬ್ಯ್ರಾಂಡೆಡ್ ವಸ್ತುಗಳು ಖರೀದಿಸುವದರಿಂದ ಮೋಸ ಹೋಗುವದು ಕಡಿಮೆ. ಪ್ಯಾಕೆಜ ಫುಡ್‍ಗಳನ್ನು ಖರೀದಿಸುವಾಗ ಯಾವುದೇ ಕಲಬೆರಕೆ ಕಂಡು ಬಂದರೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಿ. ಇತ್ತಿಚಿನ ದಿನಗಳಲ್ಲಿ ಜನರು ವಿವಿಧ ರೀತಿಯಲ್ಲಿ ಮೋಸ ಹೋಗುತ್ತಿದ್ದು ಕೆಲವರು ಒಂದು ಲಕ್ಷ ಹಣ ಕೊಟ್ಟರೆ ಆರು ತಿಂಗಳಲ್ಲಿ ಡಬಲ್ ಆಗುತ್ತದೆ ಎಂದು ತಮ್ಮಿಂದ ಮೋಸ ಮಾಡುವವರು ಇದ್ದಾರೆ. ಆರು ತಿಂಗಳಲ್ಲಿ ಅದು ಡಬಲ್ ಆಗಲು ಸಾಧ್ಯವಿಲ್ಲ ಹಾಗಾಗಿ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರಿಶ್ ದಿಲಿಫ್ ಬಡೋಲೆ ಅವರು ಮಾತನಾಡಿ, ಜಾಗೋ ಗ್ರಾಹಕ ಜಾಗೋ ಎನ್ನುವ ಜಾಹೀರಾತು ಎಲ್ಲರೂ ಕೇಳಿದ್ದೆವೆ ಇದು ಹೆಚ್ಚು ಪ್ರಚಾರವಾಗಿತ್ತು. 2019 ರಲ್ಲಿ ಜಾರಿಗೆ ತಂದ ಗ್ರಾಹಕರ ಕಾಯ್ದೆ ಗ್ರಾಹಕರಿಗೆ ಅನುಕೂಲಕರವಾಗಿ ರೂಪಿಸಲಾಗಿದೆ ಆದರೆ ಗ್ರಾಹಕರು ಮೋಸ ಹೋದಾಗ ಎಲ್ಲಿ ಹೋಗಿ ದೂರು ನೀಡಬೇಕು ಎಂದು ಅವರಿಗೆ ತಿಳಿದಿಲ್ಲ. ಇತ್ತಿಚೆಗೆ ಸೈಬರ್ ಅಫರಾದಗಳು ಹೆಚ್ಚಾಗುತ್ತಿದ್ದು ಗ್ರಾಹಕರು ಎಚ್ಚರಿಕೆಯಿಂದ ವ್ಯವಹರಿಸಬೇಕೆಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಕವಿತಾ ಹುಷಾರೆ ಅವರು ಮಾತನಾಡಿ, ಪ್ರತಿವರ್ಷ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಮಾಡುತ್ತಿದ್ದು ಇದರ ಉದ್ದೇಶ ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಗ್ರಾಹಕರ ಕಾಯ್ದೆಗಳ ಬಗ್ಗೆ ತಿಳಿಯಪಡಿಸಲಾಗುತ್ತದೆ. ಪ್ರತಿಯೊಬ್ಬರೂ ಒಂದಿಲ್ಲ ಒಂದು ಕಡೆ ಮೋಸ ಹೋಗುತ್ತಲೆ ಇರುತ್ತಾರೆ ಎಂದರು.
ವಿವಿಧ ಶಾಲಾ- ಕಾಲೇಜುಗಳಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಹಕರು ಯಾವುದೇ ಒಂದು ವಸ್ತು ಖರೀದಿಸುವ ಮುನ್ನ ಅದರ ಬಗ್ಗೆ ಮಾಹಿತಿ ಪರಿಶೀಲನೆ ಮಾಡಿ ಖರೀದಿಸಬೇಕೆಂದರು. ಬೀದರ ಜಿಲ್ಲೆಯಲ್ಲಿ ಗ್ರಾಹಕರ ಆಯೋಗಕ್ಕೆ ಬರುವ ದೂರುಗಳ ಸಂಖ್ಯೆ ಕಡಿಮೆ ಇದ್ದು ಜನರು ಮೋಸ ಹೋದರು ದೂರು ನೀಡಲು ಹಿಂದೇಟು ಹಾಕುತ್ತಾರೆ ಎಂದರು.
ಬೀದರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕರಾದ ಮಾಬು ಸಾಹೆಬ ಎಚ್. ಛಬ್ಬಿ ಮಾತನಾಡಿ, ಗ್ರಾಹಕರ ದಿನಾಚರಣೆ ಯಾವುದೇ ವರ್ಗದಲ್ಲ ಇದು ಇಡೀ ಮನುಕುಲಕ್ಕೆ ಸಂಬಂಧಿಸಿದ್ದು. ಗ್ರಾಹಕ ಎಂದರೆ ವಸ್ತುವಿಗೆ ನಿಗದಿಯಾದ ಬೆಲೆ ನೀಡಿ ಕೊಂಡುಕೊಳ್ಳುವವನೆ ಗ್ರಾಹಕ. 2019 ರ ಕಾನೂನಿನಲ್ಲಿ ಮಾರಾಟಗಾರನೆ ಎಚ್ಚರ ಎಂಬ ಕಾನೂನು ಬಂದಿದೆ. ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಿಂದ 5 ಲಕ್ಷದವರೆಗೆ ಉಚಿತವಾಗಿ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತದೆ. ಗ್ರಾಹಕರು ಖರೀದಿಸಿದ ಪ್ರತಿ ವಸ್ತುಗಳ ರಶೀದಿ ದಾಖಲೆಗಳು ಇಟ್ಟುಕೊಂಡಿರಬೇಕು ಎಂದು ಹೇಳಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೆಶಕರಾದ ಸುರೇಖಾ ಮಾತನಾಡಿ, ಪ್ರತಿವರ್ಷ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಿಸುವದರ ಉದ್ದೇಶ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಮೋಸ, ವಂಚನೆ, ಅನ್ಯಾಯಕ್ಕೆ ಒಳಗಾಗದಂತೆ ಅವರಿಗೆ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವದಾಗಿದೆ ಮತ್ತು ಪ್ರತಿ ಜಿಲ್ಲೆಗಳಲ್ಲಿ ಗ್ರಾಹಕರ ಕ್ಲಬಗಳ ಮೂಲಕ ಶಾಲಾ- ಕಾಲೇಜುಗಳಲ್ಲಿ ಈ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸುರೇಖಾ ಮುನೋಳ್ಳಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕರು ಹಾಗೂ ವಕೀಲರಾದ ಬಸವರಾಜ ಪವಾರ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಜಿ.ಶೆಟಕಾರ, ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ ಸದಸ್ಯರಾದ ಮಹೇಶ ಪಾಲಂ, ಲುಂಬಿಣಿ ಗೌತಮ, ಜಿಲ್ಲಾ ವ್ಯವಸ್ಥಾಪಕರು ಕೆ.ಎಫ್.ಸಿ.ಎಸ್. ಸಿ ಬೀದರ ವಿನೋದ, ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರದ ರಾಜು ಸೂರ್ಯನ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ ಸಿದ್ದಮ್ಮಾ ಹಂಗರಗಿ, ಜಿಲ್ಲಾ ಅಂಕಿತ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಡಾ. ಸಂತೋಷ ಕಾಳೆ, ಶಿಕ್ಷಣಾಧಿಕಾರಿ ಗುಂಡಪ್ಪ ಹುಡಗೆ, ಬೀದರ ತಾಲ್ಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಮ್.ಎಸ್.ಪಾಟೀಲ ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.