
ಕೆಜಿಎಫ್,ಮಾ,೧೮-ಗ್ರಾಹಕರಾಗಿ ಯಾವುದೇ ವಸ್ತುಗಳನ್ನು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿ ಪರಿಶೀಲಿಸಬೇಕಾದುದು ಅಗತ್ಯವಾಗಿದೆ ಎಂದು ೩ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ಧ ಬಾದಾಮಿ ತಿಳಿಸಿದರು.
ನಗರದ ಎಂ.ಜಿ.ಮಾರುಕಟ್ಟೆಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ, ನಗರಸಭೆ ಮತ್ತು ಎಂ.ಜಿ.ಮಾರುಕಟ್ಟೆ ವರ್ತಕರ ಸಂಘದಿಂದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ೧೯೮೮ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು ಭಾರತದಲ್ಲಿನ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುತ್ತದೆ ಎಂದರು.
ಭಾರತದಲ್ಲಿ ಅಧಿಕೃತವಾಗಿ ೧೯೮೬ರ ಡಿ.೨೪ ರಂದು ವಿಶ್ವ ಗ್ರಾಹಕ ದಿನವನ್ನು ಜಾರಿಗೆ ತರಲಾಗಿದ್ದು, ಅಂದಿನಿಂದ ಪ್ರತಿವರ್ಷ ಡಿ.೨೪ರಂದು ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ. ಶುದ್ಧ ಶಕ್ತಿಯ ಪರಿವರ್ತನೆಯ ಮೂಲಕ ಗ್ರಾಹಕರನ್ನು ಸಬಲೀಕರಣಗೊಳಿಸುವುದು, ಗ್ರಾಹಕರ ಹಕ್ಕುಗಳು, ಗ್ರಾಹಕರ ರಕ್ಷಣೆ ಮತ್ತು ಗ್ರಾಹಕರ ಸಬಲೀಕರಣದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಗ್ರಾಹಕ ದಿನದ ಉದ್ಧೇಶವಾಗಿದೆ ಎಂದರು.
ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಅಧ್ಯಕ್ಷ ಮಹೇಶ ಎಸ್ ಪಾಟೀಲ, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ಮಂಜುನಾಥ್.ಆರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಎಂ.ಜಿ.ಮಾರುಕಟ್ಟೆ ಅಧ್ಯಕ್ಷ ದೇವೇಂದ್ರನ್ ಇದ್ದರು.