ಗ್ರಾಹಕರಿಗೆ 5 ಕೆ.ಜಿ. ಎಲ್.ಪಿ.ಜಿ. ಸಿಲಿಂಡರ್ ಲಭ್ಯ

ಕಲಬುರಗಿ,ಏ.03:ಈ ಹಿಂದೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗಳಡಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳು 14.2 ಕೆ.ಜಿ ತೂಕದ ಎಲ್.ಪಿ.ಜಿ. ಸಿಲಿಂಡರ್ ಬದಲಾಗಿ ಕಡಿಮೆ ವೆಚ್ಚದಲ್ಲಿ ದೊರಕುವ 5 ಕೆ.ಜಿ. ಸಾಮಥ್ರ್ಯದ ಎಲ್.ಪಿ.ಜಿ. ಸಿಲಿಂಡರ್‍ನ್ನು ಉಪಯೋಗಿಸಬಹುದಾಗಿದೆ ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

   ಪ್ರತಿ ಸಿಲಿಂಡರ್‍ಗಾಗಿ ಹೆಚ್ಚಿನ ದರವನ್ನು ಪಾವತಿಸಲು ಗ್ರಾಹಕರು ಹಿಂಜರಿಯುತ್ತಿದ್ದಾರೆ. ಆದ್ದರಿಂದ 14.2 ಕೆ.ಜಿ. ಸಿಲಿಂಡರ್‍ಗೆ ಹಣ ವ್ಯಯಿಸಲಾಗದ ಕುಟುಂಬಗಳು 5 ಕೆ.ಜಿ. ಸಾಮಥ್ರ್ಯದ ಸಿಲಿಂಡರ್ ಪಡೆಯಬಹುದಾಗಿದೆ.  ಸಾಧಾರಣವಾಗಿ ಬಳಸುವ 14.2 ಕೆ.ಜಿ ಸಾಮಥ್ರ್ಯದ ಗೃಹ ಬಳಕೆಯ ಸಿಲಿಂಡರ್ ಬದಲಾಗಿ ವಿಶೇಷ 5 ಕೆ.ಜಿ ತೂಕದ ಸಿಲಿಂಡರ್‍ಗಳನ್ನು ಬಳಕೆ ಮಾಡುವುದರಿಂದ ಗ್ರಾಹಕರಿಗೆ ಪ್ರತಿ ಸಿಲಿಂಡರ್‍ಗೆ ತಗುಲುವ ವೆಚ್ಚ ಸುಮಾರು ಅರ್ಧದಷ್ಟು ಕಡಿಮೆಯಾಗಲಿದೆ.  

 ಮುಖ್ಯಮಂತ್ರಿ ಅನಿಲಭಾಗ್ಯ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವ ಫಲಾನುಭವಿಗಳು ಅಡುಗೆ ಅನಿಲ ಬಳಕೆಯನ್ನು ಸಮರ್ಪಕವಾಗಿ ಮುಂದುವರಿಸದೇ ಇರುವುದು ಕಂಡು ಬಂದಿದ್ದು, ಆರಂಭದಲ್ಲಿ ನೀಡಲಾಗಿದ್ದ ಉಚಿತ ಸಿಲಿಂಡರ್‍ಗಳನ್ನು ಬಳಕೆ ಮಾಡಿದ್ದು, ಮುಂದೆ ರಿಫೀಲ್ ಪಡೆಯಲು ವಿಳಂಬ ಮಾಡುತ್ತಿದ್ದಾರೆಂದು ಇತ್ತೀಚೆಗೆ ತೈಲ ಕಂಪನಿಗಳಿಂದ ಪಡೆದಿರುವ ಮಾಹಿತಿಯಿಂದ ತಿಳಿದು ಬಂದಿರುತ್ತದೆ. 

 ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳು ಅಡುಗೆ ಅನಿಲವನ್ನು ಬಳಸುವಂತೆ ಹಾಗೂ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.  ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕಗಳನ್ನು ಜಿಲ್ಲೆಯಲ್ಲಿ ನೀಡಲಾಗಿದೆ.