ಗ್ರಾಹಕರಿಗೆ ಮೋಸ ಮಾಡುವ ವ್ಯಾಪಾರಿಗಳಿಗೆ ಶಿಕ್ಷೆ ವಿಧಿಸುವ ಕಾನೂನು ಜಾರಿ

ಬೀದರ:ಜ.1: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಶ್ರೀ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ನಡೆಯಿತು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ರಾಜಮೋಹನ ಶ್ರೀ ವಾಸ್ತವ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರ ಹಕ್ಕುಗಳ ಬಗ್ಗೆ ಹಾಗೂ ಕಾಯ್ದೆಯ ವ್ಯಾಪ್ತಿ ಮತ್ತು ವೈಶಿಷ್ಟ್ಯತೆಗಳ ಬಗ್ಗೆ ಹಾಗೂ ಗ್ರಾಹಕ ಸಂರಕ್ಷಣಾ ಕಾಯ್ದೆಗಳ ಬಗ್ಗೆ ವಿವರಿಸಿದರು. ಗ್ರಾಹಕರಿಗೆ ಮೋಸ ಮಾಡುವ ವ್ಯಾಪಾರಿಗಳಿಗೆ ಅಥವಾ ಉತ್ಪಾದಕರಿಗೆ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಿದೆ ಎಂದು ತಿಳಿಸಿದರು.
ಬಿ.ವ್ಹಿ.ಭೂಮರೆಡ್ಡಿ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಅನಿಲಕುಮಾರ ಆನದೂರೆ ಅವರು ಉಪನ್ಯಾಸ ನೀಡಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಹೊಸ ವೈಶಿಷ್ಟ್ಯಗಳ ಹಾಗೂ ಗ್ರಾಹಕರು ವಸ್ತು ಖರೀದಿಸುವಾಗ ಮತ್ತು ಉತ್ಪನ್ನಗಳ ಬಗ್ಗೆ ಅತೀ ಕಾಳಜಿ ವಹಿಸಿ ಹೊಸ ಕಾಯ್ದೆ 2019ರಡಿಯಲ್ಲಿ ದೂರುಗಳು ನೀಡುವುದರ ಕಾನೂನಿನ ವಿವಿಧ ಆಯಾಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಗ್ರಾಹಕರು ಯಾವುದೇ ವ್ಯವಹಾರ ಮಾಡಬೇಕಾದಾಗ ಅಥವಾ ವಸ್ತುಗಳನ್ನು ಕೊಳ್ಳುವಾಗ ಗುಣಮಟ್ಟ ಹಾಗೂ ಮೌಲ್ಯಗಳನ್ನು ಪರೀಕ್ಷಿಸಿದ ನಂತರ ಖರೀದಿಸಬೇಕು. ಯಾವ ವಸ್ತುಗಳಿಗೆ ಯಾವ ಟ್ರೇಡ್ ಮಾರ್ಕ್‍ಗಳು ಇದೆ ಎಂಬುದನ್ನು ಪರಿಶೀಲಿಸಿ ನೋಡಿ ಖರೀದಿಸಬೇಕು. ಗ್ರಾಹಕರು ಕೊಳ್ಳುವಾಗ ಅಥವಾ ಆನ್‍ಲೈನ್ ವ್ಯಾಪಾರದಲ್ಲಿ ಮೋಸ ಹೋದಾಗ ಧೈರ್ಯವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರ ನೀಡಲು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಯಮನಪ್ಪ ಕೆ ಅವರು ಮಾತನಾಡಿ, ಗ್ರಾಹಕರು ಎಚ್ಚೆತ್ತುಕೊಳ್ಳಬೇಕು. ಯಾವುದೇ ವಸ್ತುಗಳನ್ನು ಖರೀದಿಸುವಾಗ ಜಾಗೃತಿ ವಹಿಸಬೇಕು. ನಾವು ನೀಡುವ ಹಣಕ್ಕೆ ಸರಿಯಾಗಿ ನಾವು ಪಡೆಯುವ ವಸ್ತು ಅಥವಾ ಸೇವೆಯ ಗುಣಮಟ್ಟ ಸಮನಾಗಿ ಪಡೆಯುವ ಹಕ್ಕು ಪ್ರತಿ ಗ್ರಾಹಕರಿಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಿ.ಬಾಬುರೆಡ್ಡಿ ಅವರು ಪ್ರಾಸ್ತಾವಿಕ ಮಾತನಾಡಿ, ಪ್ರತಿ ವರ್ಷ ಡಿಸೆಂಬರ್-24ರ ದಿನವನ್ನು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಗಿ ದೇಶದಲ್ಲಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಹಾಯಕ ನಿರ್ದೇಶಕರಾದ ಶ್ರೀ ಯೋಗಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಶ್ರೀ ರಾಜು ಸೂರ್ಯನ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಪ್ರಾಧಿಕಾರದ ಅಂಕಿತ ಅಧಿಕಾರಿ ಶ್ರೀ ಸಂತೋಷ ಕಾಳೆ ಮತ್ತು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಶ್ರೀ ಸಂಚಾಲಕರಾದ ಬಸವರಾಜ ಪವಾರ್ ಭಾಗವಹಿಸಿದ್ದರು.