ಗ್ರಾಮ ಸ್ವಚ್ಛತೆಗೆ ಒತ್ತು ಕೊಡಿ: ಪಿಡಿಓಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ

ಬೀದರ:ಜೂ.11: ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಮೊದಲ ಆದ್ಯತೆಯಾಗಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಔರಾದ ತಾಲ್ಲೂಕಿನ ಎಕಂಬಾ, ಬಾದಲಗಾಂವ್, ಸುಂದಾಳ, ನಾಗಮಾರಪಳ್ಳಿ, ರಾಯಪಳ್ಳಿ, ಚಿಂತಾಕಿ, ನಾಗನಪಲ್ಲಿ, ಗುಡಪಳ್ಳಿ, ವಡಗಾಂವ್, ಚಿಕ್ಲಿ(ಜೆ), ಜಮಗಿ, ಜೋಜನಾ, ಕೊಳ್ಳೂರ್ ಹಾಗೂ ಎಕಲಾರ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡ ಸಚಿವರು, ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಕಡೆಗಳಲ್ಲಿ ಚರಂಡಿಗಳಿಲ್ಲದೇ ನೀರು ರಸ್ತೆಯ ಮೇಲೆ ಹರಿಯುವುದನ್ನು ಕಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಗ್ರಾಮಗಳಲ್ಲಿರುವ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಚರಂಡಿಗಳಿಲ್ಲದ ಕಡೆ ಹೊಸ ಚರಂಡಿಗಳನ್ನು ನಿರ್ಮಿಸಲು ಕ್ರಮ ವಹಿಸಬೇಕು. ಹಾಗೆಯೇ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಮೂಲಕ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಊರಲ್ಲಿ ಆಗಾಗ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಎಲ್ಲ ಗ್ರಾಮಗಳನ್ನು ಸ್ಯಾನಿಟೈಸ್ ಹಾಗೂ ಫಾಗಿಂಗ್ ಮಾಡಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಗ್ರಾಮಗಳಲ್ಲಿರುವ ಶಾಲೆ ಆವರಣ, ಅಂಗನವಾಡಿ ಕಟ್ಟಡ, ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳ ಆವರಣಗಳಲ್ಲಿ ಸಸಿಗಳನ್ನು ನೆಡಲು ಮುಂದಾಗಬೇಕು. ಯಾವುದೇ ಗ್ರಾಮಗಳಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮೋಟಾರ್ ಕೆಟ್ಟು ಹೋಗಿದೆ, ವಿದ್ಯುತ್ ತಂತಿ ಸರಿಯಿಲ್ಲ. ಪೈಪ್ ಸೋರಿಕೆಯಾಗುತ್ತಿದೆ ಎಂಬ ಸಬೂಬುಗಳನ್ನು ನೀಡದೇ ಎಲ್ಲ ಗ್ರಾಮಗಳಲ್ಲಿ ಸರಿಯಾಗಿ ನೀರು ಪೂರೈಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಮತ್ತು ಲಾಕ್‍ಡೌನ್‍ನಿಂದಾಗಿ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಕೆಲಸ ಕೇಳಿಕೊಂಡು ಬರುವ ಪ್ರತಿಯೊಬ್ಬರಿಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಿಕೊಡಬೇಕು. ಈ ವಿಷಯದಲ್ಲಿ ಯಾರಿಂದಲೂ ದೂರುಗಳು ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಪಿಡಿಓಗಳಿಗೆ ತಿಳಿಸಿದರು.

ಲಸಿಕೆಯ ಜಾಗೃತಿ ಮೂಡಿಸಿ: ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಎಲ್ಲ ಕಡೆಗಳಲ್ಲಿ ಜಾಗೃತಿ ಮೂಡಿಸಬೇಕು. ಲಸಿಕೆ ನೀಡಲು ಹೆಚ್ಚು ಗಮನ ಹರಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.

ದಾಖಲಾತಿ ನಿರ್ವಹಿಸಿ: ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ನಿರಂತರ ಶ್ರಮಿಸುತ್ತಿದ್ದಾರೆ. ತಾವು ಪ್ರತಿದಿನ ಮಾಡುವ ಕೆಲಸಗಳನ್ನು ವಹಿಯಲ್ಲಿ ದಾಖಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಯ್ಯಾ ಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಬಂಡೆಪ್ಪಾ ಕಂಟೆ, ರಮೇಶ ಉಪಾಸೆ, ಕಾಶಿನಾಥ ಜಾಧವ, ಶೇಶರಾವ ಕೋಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.