ಗ್ರಾಮ ಸ್ವಚ್ಚತೆಗೆ ಆದ್ಯತೆ: ಬಾಣದರಂಗಯ್ಯ

ಮಧುಗಿರಿ, ಮಾ. ೨೩- ತಾಲ್ಲೂಕಿನ ಡಿ.ವಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾಯಗೊಂಡನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಗಳಲ್ಲಿ ಸ್ವಚ್ಛತೆಯ ಜತೆಗೆ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಮತ್ತು ವಕೀಲರೂ ಆಗಿರುವ ಬಾಣದ ರಂಗಯ್ಯ ರವರು ತಮ್ಮದೇ ಆದ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಚುನಾವಣೆ ಗೆದ್ದು ಎರಡು ತಿಂಗಳಾದ ನಂತರ ೨೦೨೧ ರ ಫೆಬ್ರವರಿ ೨೮ ರಂದು ನಮ್ಮ ಗ್ರಾಮ ನಮ್ಮ ಸ್ವಚತೆ’ ಎಂಬ ಶೀರ್ಷಿಕೆಯಡಿ ಗ್ರಾಮದಲ್ಲಿರುವ ಚರಂಡಿಗಳು, ವಿದ್ಯುತ್ ದೀಪಗಳ ಅಳವಡಿಕೆ, ಕಿರು ನೀರು ಸರಬರಾಜು ವ್ಯವಸ್ಥೆ ಸರಿಪಡಿಸುವ ಪ್ರಯತ್ನವನ್ನು ಯಶಸ್ವಿಗೊಳಿಸಿದ್ದರು. ಇವರಿಗೆ ಗ್ರಾಮದ ಯುವಕರು ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಬಾಣದರಂಗಯ್ಯ, ಮುಂದಿನ ದಿನಗಳಲ್ಲಿ “ನಮ್ಮ ಗ್ರಾಮ ನಮ್ಮ ಸಮಸ್ಯೆ ಎಂಬ ಧ್ಯೇಯ ವಾಕ್ಯದೊಂದಿಗೆ ನನ್ನ ಮತ ಕ್ಷೇತ್ರದಲ್ಲಿ ಬರುವ ಎಲ್ಲಾ ರೀತಿಯ ಪಿಂಚಣಿ ವಂಚಿತರನ್ನು, ವಿಕಲಚೇತನರನ್ನು, ಬಾಲ ಕಾರ್ಮಿಕರು, ಜೀತ ಪದ್ದತಿ ಮಾಡುತ್ತಿರುವವರನ್ನು ಪತ್ತೆ ಹಚ್ಚುವ ಸಲುವಾಗಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಸರ್ಕಾರದಿಂದ ಸವಲತ್ತು ಕೊಡಿಸುವುದು, ಪರಿಸರ ಉಳಿಸುವ ಸಲುವಾಗಿ ಇನ್ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮ ಆರೋಗ್ಯ ತಪಾಸಣಾ ಉಚಿತ ಶಿಬಿರಗಳು, ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎಂದರು.
ನಾವು ಚುನಾವಣೆ ಸ್ಪರ್ಧಿಸಿ ಹೋದಾಗ ಮತದಾರರನ್ನು ಸೆಳೆಯುವ ಸಲುವಾಗಿ ಸಾಕಷ್ಟು ಭರವಸೆಗಳನ್ನು ನೀಡಿರುತ್ತೇವೆ. ಅದನ್ನು ಈಡೇರಿಸುವ ಪ್ರಯತ್ನ ಇದಾಗಿದೆ ಎಂದರು.
ನಾನು ಕಳೆದ ೪೦ ವರ್ಷಗಳಿಂದ ರಾಜಕಾರಣ ನೋಡುತ್ತಿದ್ದೇನೆ. ಚುನಾಯಿತ ಜನಪ್ರತಿನಿಧಿಗಳು ಗೆದ್ದ ನಂತರ ೫ ವರ್ಷ ಕ್ಷೇತ್ರದ ಕಡೆ ತಲೆ ಹಾಕದೆ ಇರುವುದನ್ನು ಕಂಡಿದ್ದೇನೆ. ಸೇವಾ ದೃಷ್ಟಿಯನ್ನೇ ಮರೆತಂತೆ ಕಾಣುತ್ತಾರೆ. ಹೊಸಹಳ್ಳಿ ಗ್ರಾಮದ ಶಾಲೆ ಶಿಥಿಲಾವಸ್ಥೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಇಲ್ಲಿಂದ ಆಯ್ಕೆಯಾದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರುಗಳಿಗೆ ಕಾಣಲಿಲ್ಲವೇ, ಸರ್ಕಾರದ ಅನುದಾನ ಏನಾಗಿದೆ ಎಂಬುದು ಪ್ರಶ್ನಿಸುವಂತಾಗಿದೆ ಎಂದರು.
ನಾನು ರಾಜಕೀಯ ಜೀವನಕ್ಕೆ ಅಪರೂಪಕ್ಕೆ ಪ್ರವೇಶಿಸಿದ್ದು, ಅಧಿಕಾರ ಇರಲಿ, ಬಿಡಲಿ ಜನಾಧಿಕಾರ ಸಂಸ್ಥೆ ವತಿಯಿಂದ ಜನಮೆಚ್ಚುವ ಕೆಲಸ ಮಾಡುತ್ತೇನೆ ಎಂದರು.