ಗ್ರಾಮ ಸಮರ : ನಾಳೆ ಮತ ಎಣಿಕೆ

ಬೆಂಗಳೂರು, ಡಿ. ೨೯- ರಾಜಕೀಯ ಪಕ್ಷಗಳಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಭದ್ರಬುನಾದಿಯೆಂದೇ ಪರಿಗಣಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಗ್ರಾಮ ಪಂಚಾಯಿತಿಗೆ ಡಿ. ೨೨ ಮತ್ತು ೨೭ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನಾಳೆ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬಹಿರಂಗವಾಗಲಿದೆ.
ಡಿ. ೨೨ ರಂದು ನಡೆದಿದ್ದ ಮೊದಲ ಹಂತದಲ್ಲಿ ರಾಜ್ಯದ ೩,೦೧೯ ಗ್ರಾಮ ಪಂಚಾಯಿತಿಗಳ ೪೩,೨೩೮ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ೧,೧೭,೩೮೩ ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲ ಹಂತದಲ್ಲಿ ೪,೩೭೭ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಆಗಿತ್ತು. ಡಿ. ೨೭ ರಂದು ೨,೭೦೯ ಗ್ರಾಮ ಪಂಚಾಯಿತಿಯ ೩೯,೩೭೮ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದ ಚುನಾವಣೆಯಲ್ಲಿ ೧,೦೫,೪೩೧ ಅಭ್ಯರ್ಥಿಗಳು ಕಣದಲ್ಲಿದ್ದರು. ೩,೬೯೭ ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದೆ. ೨೧೬ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.
ಡಿ. ೨೨ ರಂದು ನಡೆದಿದ್ದ ಮೊದಲ ಹಂತದ ಚುನಾವಣೆಯಲ್ಲಿ ಸರಾಸರಿ ಶೇ. ೮೨.೦೪ ರಷ್ಟು ಮತದಾನ ಆಗಿತ್ತು. ಡಿ. ೨೭ ರಂದು ನಡೆದಿದ್ದ ಎರಡನೇ ಹಂತದ ಚುನಾವಣೆಯಲ್ಲಿ ಸರಾಸರಿ ಶೇ. ೮೦.೭೧ ರಷ್ಟು ಮತದಾನ ಆಗಿತ್ತು. ಒಟ್ಟಾರೆ ಎರಡು ಹಂತಗಳಲ್ಲಿ ೫,೭೨೮ ಪಂಚಾಯಿತಿಗಳ ೮೨,೬೧೮ ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದೆ.
ಮತ ಎಣಿಕೆಗೆ ಭದ್ರತೆ
ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಆಯಾ ತಾಲ್ಲೂಕುಗಳಲ್ಲಿ ನಾಳೆ ಬೆಳಿಗ್ಗೆ ೮ ರಿಂದ ಆರಂಭವಾಗಲಿದೆ. ಮತ ಎಣಿಕೆಗೆ ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮತ ಎಣಿಕೆ ನಡೆಯುವ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲೂ ಮತ ಎಣಿಕೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯ ಮತ ಎಣಿಕೆಗೆ ಟೇಬಲ್ ಗಳನ್ನು ನಿಗದಿಪಡಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲೂ ಕೊರೊನಾ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಮತ ಎಣಿಕೆ ಕೇಂದ್ರದ ಬಳಿ ಜನ ಗುಂಪುಗೂಡದಂತೆ, ಎಚ್ಚರಿಕೆ ವಹಿಸಲಾಗಿದೆ. ಗೆದ್ದ ಅಭ್ಯರ್ಥಿಯ ವಿಜಯೋತ್ಸವ ಆಚರಣೆಗೂ ನಿರ್ಬಂಧ ಹೇರಲಾಗಿದೆ.
ಲೆಕ್ಕಾಚಾರ ಬೆಟ್ಟಿಂಗ್
ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಮತದಾನ ಮುಗಿಯುತ್ತಿದ್ದಂತೆ, ಹಳ್ಳಿಗಳಲ್ಲಿ ಚಲಾವಣೆಯಾಗಿರುವ ಮತಗಳನ್ನು ಆಧರಿಸಿ ಅಭ್ಯರ್ಥಿಗಳ ಸೋಲು – ಗೆಲುವಿನ ಲೆಕ್ಕಾಚಾರ ನಡೆದಿದ್ದು, ಹಲವೆಡೆ ಬೆಟ್ಟಿಂಗ್ ಸಹ ಜೋರಾಗಿದೆ. ಚುನಾವಣೆಯಲ್ಲಿ ಇಂತಹವರೇ ಗೆಲ್ಲುತ್ತಾರೆ ಎಂದು ನೂರು ರೂ. ನಿಂದ ಲಕ್ಷಾಂತರ ರೂ. ಗಳ ವರೆಗೂ ಬೆಟ್ಟಿಂಗ್ ಕಟ್ಟಲಾಗುತ್ತಿದ್ದು, ಕೆಲವರು ಬೆಟ್ಟಿಂಗ್ ಗಾಗಿ ಹೊಲ – ಮನೆಗಳನ್ನೂ ಪಣಕ್ಕಿಟ್ಟಿದ್ದಾರೆ.
ಪಕ್ಷಗಳ ಚಿಹ್ನೆಯ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯದಿದ್ದರೂ, ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಒಂದಲ್ಲಾಒಂದು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಈ ಚುನಾವಣೆ ರಾಜಕೀಯ ಪಕ್ಷಗಳಿಗೂ ಮಹತ್ವದ್ದಾಗಿದ್ದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಪಕ್ಷವನ್ನು ಹಳ್ಳಿಗಳಲ್ಲಿ ಗಟ್ಟಿಗೊಳಿಸುವ ಲೆಕ್ಕಾಚಾರ ರಾಜಕೀಯ ಪಕ್ಷಗಳದ್ದಾಗಿದೆ.