ಗ್ರಾಮ ಸಭೆಗಳ ಮಹತ್ವ ಅರಿಯಲು ಸಲಹೆ

ವಿಜಯಪುರ.ಜ೧೨:ಗ್ರಾಮಸಭೆಗಳ ಮಹತ್ವವನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್ ಹೇಳಿದರು.
ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಹಳ್ಳಿ ಗ್ರಾಮದಲ್ಲಿ ನಡೆದ ೨೦೨೩-೨೪ ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಹಳ್ಳಿಗಳ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ನೀಡಬೇಕು. ಚರ್ಚೆ ನಡೆಸಬೇಕು. ಭಾಗವಹಿಸಬೇಕು. ಆಗ ಮಾತ್ರ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಪಿಡಿಓ ಆರ್.ಜಿ.ಸೌಮ್ಯ ಅವರು ಗ್ರಾಮಸಭೆಯ ಮೂಲ ಉದ್ದೇಶವನ್ನು ಸಾರ್ವಜನಿಕರಿಗೆ ತಿಳಿಸಿದರು. ಗ್ರಾಮ ಪಂಚಾಯಿತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ನರೇಗಾ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.
ಕೃಷಿ, ತೋಟಗಾರಿಕೆ, ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೇಷ್ಮೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಸಿಗುವಂತಹ ಸೌಲಭ್ಯಗಳ ಕುರಿತು ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಿದರು.
ಹಾರೋಹಳ್ಳಿ, ತಿಮ್ಮಹಳ್ಳಿ, ಚಿಕ್ಕನಹಳ್ಳಿ, ದೊಡ್ಡಮುದ್ದೇನಹಳ್ಳಿ, ಬುಳ್ಳಹಳ್ಳಿ ಗ್ರಾಮಗಳ ಸಾರ್ವಜನಿಕರು ಗ್ರಾಮಸಭೆಯಲ್ಲಿ ಸೇರಿದ್ದರು. ತಿಮ್ಮಹಳ್ಳಿ ಗ್ರಾಮದಲ್ಲಿ ಬಳಕೆಯಾದ ನೀರು ಹೊರಗೆ ಹೋಗಲು ಜಾಗವಿಲ್ಲ, ರಾಜಕಾಲುವೆ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸಿ ರಾಜಕಾಲುವೆಯ ಮೂಲಕ ನೀರು ಕೆರೆಗೆ ಹರಿದುಹೋಗುವಂತೆ ಮಾಡಬೇಕು. ದಂಡಿಗಾನಹಳ್ಳಿಯವರೆಗೂ ರಸ್ತೆ ನಿರ್ಮಾಣವಾಗಬೇಕು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು, ನರೇಗಾ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡುವಂತೆ ತಿಮ್ಮಹಳ್ಳಿ ಗ್ರಾಮದವರು ಪ್ರಸ್ತಾಪ ಮಾಡಿದರು.
ದೊಡ್ಡಮುದ್ದೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲ. ಈ ಕುರಿತು ನಾವು ಹಲವಾರು ಬಾರಿ ಮನವಿಗಳು ಕೊಟ್ಟರೂ ಯಾವುದೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ. ಅಂಗನವಾಡಿ ಕೇಂದ್ರ ಸುಸಜ್ಜಿತವಾಗಿಲ್ಲ. ಶಾಲೆಯ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮಸಭೆಯಲ್ಲಿ ತಾಲ್ಲೂಕು ಮಟ್ಟದ ಯಾವುದೇ ಅಧಿಕಾರಿಗಳು ಬಂದಿಲ್ಲ. ನಮ್ಮ ಸಮಸ್ಯೆಗಳನ್ನು ನಾವು ಯಾರಿಗೆ ಹೇಳಬೇಕು? ಅನುಷ್ಟಾನಾಧಿಕಾರಿಗಳು ಇಲ್ಲದೆ ಹೋದರೆ, ನಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವವರು ಯಾರು? ಈ ಯಾವ ಯಾವ ಇಲಾಖೆಯಿಂದ ಅನುಷ್ಟಾನಾಧಿಕಾರಿಗಳು ಬಂದಿಲ್ಲವೋ ಅವರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವರಾಜ್ ಒತ್ತಾಯಿಸಿದರು.
ಕೃಷಿ ಇಲಾಖೆಯ ಅಧಿಕಾರಿ ಶ್ವೇತಾ ಮಾತನಾಡಿ, ರೈತರು, ಕಡ್ಡಾಯವಾಗಿ ಎಫ್.ಐ.ಡಿ.ಸಂಖ್ಯೆ ಮಾಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ಯಾವುದೇ ಇಲಾಖೆಯಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಇದು ಉಪಯೋಗವಾಗಲಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ್ ಮಾತನಾಡಿ, ನಾವು ಸಾಕಷ್ಟು ಮನವಿ ಮಾಡಿದರೂ ಶಾಸಕರು ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳು ಬಂದಿಲ್ಲ. ಇಂತಹ ಸಮಯದಲ್ಲಿ ನಮ್ಮ ಪ್ರಯತ್ನಗಳು ವಿಫಲವಾಗುತ್ತವೆ ಎಂದು ತಮ್ಮ ಮಾತು ಮೊಟಕುಗೊಳಿಸಿದರು.

ಗ್ರಾಮಸಭೆ ನೋಡಲ್ ಅಧಿಕಾರಿ ಬಿ.ವಿ.ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಶ್ರೀನಿವಾಸ್, ಆಂಜಿನಮ್ಮ, ಮಂಜುಳಮ್ಮ, ನರಸಮ್ಮ, ಎನ್.ಮಂಜುಳಮ್ಮ, ಟಿ.ಎಂ.ಹರೀಶ್, ಡಿ.ಎಂ.ಸತೀಶ್, ಎಸ್.ಮಂಜುಳಾ, ನಾಗಮ್ಮ, ಎಂ.ಶಂಕರ್ ಪಂಚಾಯಿತಿ ಕಾರ್ಯದರ್ಶಿ ರಾಜೇಶ್, ಕರವಸೂಲಿಗಾರ ಮುನಿಕೃಷ್ಣಪ್ಪ, ಮುಖಂಡರುಗಳು ಹಾಜರಿದ್ದರು.