ಗ್ರಾಮ ಸಭೆಗಳಿಗೆ ಮದ್ಯ ನಿಷೇಧಕ್ಕೆ ಅಧಿಕಾರ ನೀಡಲಿ

ರಾಯಚೂರು,ಮಾ.೧೪- ಗ್ರಾಮ ಸಭೆಗಳಿಗೆ ಮದ್ಯ ನಿಷೇಧ ಮಾಡಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಮದ್ಯ ನಿಷೇದ ಆಂದೋಲನದ ಜಿಲ್ಲಾ ಸಂಚಾಲಕ ಮೋಕ್ಷಮ್ಮ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದ ಮಹಿಳೆಯರ ಘನತೆ, ಗೌರವ ಕಾಪಡಲು ಮತ್ತು ಸ್ವಾಭಿಮಾನದ ಬದುಕಿಗಾಗಿ ಮದ್ಯ ನಿಷೇಧ ಆಂದೋಲನವು ಕರ್ನಾಟಕದಲ್ಲಿ ಸತತ ೭ ವರ್ಷಗಳಿಂದ ರಾಜ್ಯದ್ಯಂತ ಮದ್ಯ ನಿಷೇಧಕ್ಕಾಗಿ ಹೋರಾಟಗಳನ್ನು ನಡೆಸುತ್ತಲೇ ಇದೆ. ಲಕ್ಷಾಂತರ ಮಹಿಳೆಯರು ಚಳುವಳಿಯ ಭಾಗವಾಗಿ ಆಡಳಿತ ಪಕ್ಷಗಳ ಮೇಲೆ ಒತ್ತಡ ಹೇರುತ್ತ ಬಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
೫ ವರ್ಷದಲ್ಲಿ ೧ ಲಕ್ಷ ಕೋಟಿ ಅಬಕಾರಿ ಆದಾಯಗಳಿಸಿದ್ದೇವೆ ಎಂದು ಬೀಗುತ್ತಿದೆ. ಆಕ್ರಮ ಮದ್ಯ ಮಾರಾಟ ತಡೆಗೆ ಮೇಲ್ವಿಚಾರಣಾ ಸಮಿತಿ ರಚನೆ ಆಗಬೇಕು, ಈ ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರ ನೀಡಿ ಕರ್ನಾಟಕ ಪಾನ ನಿಷೇಧ ಕಾಯ್ದೆ ೧೯೬೧ ರ ೨ನೆ ಅಧ್ಯಾಯ ಕ್ರ.ಸಂ.೮ರ ಪ್ರಕಾರ ಸಾಮಾನ್ಯ ಸರಕಾರಿ ಆದೇಶ (ಜಿ ಒ) ಹೊರಡಿಸಬೇಕು.ಸಂವಿಧಾನದ ೭೩ನೇ ತಿದ್ದುಪಡಿ ಪ್ರಕಾರ ಹಳ್ಳಿಗಳಲ್ಲಿ ಆಕ್ರಮ ಮಧ್ಯ ಮಾರಾಟ ನಿಲ್ಲಿಸಲು ವಿಶೇಷ ಗ್ರಾಮ ಸಭೆ ಮಾಡಿ ಅದನ್ನ ತಡೆಯುವ ಅಧಿಕಾರ ಗ್ರಾಮ ಪಂಚಾಯ್ತಿಗಳಿಗೆ ನೀಡಬೇಕು.ಅಕ್ರಮ ಮಧ್ಯಮಾರಾಟ ಮಾಡುವವರನ್ನು ಗುರುತಿಸಿ ಗ್ರಾಮ ಸಭೆಯಲ್ಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರ ಪಾನ ನಿಷೇಧ ಕಾಯ್ದೆಯ ಮಾದರಿಯಂತೆ ೧೦% ಜನರು ಸರಹದ್ದಿನಲ್ಲಿ ಮದ್ಯ ಮಾರಾಟಕ್ಕೆ ವಿರೋಧಿಸಿದರೆ ಮದ್ಯದಂಗಡಿಗಳಿಗೆ ಪರವಾಣಿಗೆ ಕೊಡಬಾರದು ಎಂಬ ಅಂಶಗಳನ್ನು ಕರ್ನಾಟಕ ಪಾನ ನಿಷೇಧ ಕಾಯಿದೆ ಅದ್ಯಾಯ ೩ ರಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾ ಪಾಟೀಲ್,ಬಸಮ್ಮ, ಮಾರೆಮ್ಮ,ಅಂಬ್ರಮ್ಮ ಇದ್ದರು.