ಗ್ರಾಮ ಸಡಕ್ ಮಹಾತ್ವಕಾಂಕ್ಷಿ ಯೋಜನೆಯಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಅಂಗಾರ

ಕಡಬ, ಎ.೧೭- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೂರದೃಷ್ಟಿಯ ಕಲ್ಪನೆಯಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದಾಗಿ ಇಂದು ತೀರಾ ಹದಗೆಟ್ಟು  ದುಸ್ಥಿತಿಯಲ್ಲಿದ್ದ ಗ್ರಾಮೀಣ ರಸ್ತೆಗಳಿಗೆ ಹೊಸ ರೂಪ ನೀಡಿ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಹೇಳಿದರು.

ಅವರು ಶುಕ್ರವಾರ ಕೋಡಿಂಬಾಳದಿಂದ ಕೋರಿಯಾರ್, ಕರ್ಮಾಯಿ, ಪಾದೆಮಜಲು, ಕೊಡೆಂಕಿರಿ, ಬ್ರಾಂತಿಕಟ್ಟೆ ಮೂಲಕ ಐತ್ತೂರನ್ನು ಸಂಪರ್ಕಿಸುವ ೮.೪  ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ೮.೫೫ ಕೋಟಿ ರೂ. ಅನುದಾನದಲ್ಲಿ  ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಧಾನ ಮಂತ್ರಿ ಗ್ರಾಮ ಸಡಕ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವ ದೂರದೃಷ್ಟಿಯ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆದರೆ ಬಳಿಕ ಅಧಿಕಾರಕ್ಕೆ ಬಂದ ಸರಕಾರ ಆ ಯೋಜನೆಯನ್ನು  ಕೈಬಿಟ್ಟಿತು. ಆಗ ರಾಜ್ಯದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಜಾರಿಗೆ ತಂದು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಂದಾಯಿತು. ಇದೀಗ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ಸಡಕ್ ಯೋಜನೆಯ ಮೂಲಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ. ಅದರಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಮಾತನಾಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ವಾಜಪೇಯಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿರುವ ಪ್ರಧಾನಿ ಮೋದಿಯವರು ಕಳೆದ ವರ್ಷ ರಾಜ್ಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ೧೫೦ ಕೋಟಿ ರೂ. ವಿಶೇಷ ಅನುದಾನ ನೀಡಿದ್ದರು. ಕೋವಿಡ್ ಸಂಕಷ್ಟದ ನಡುವೆಯೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಈ ವರ್ಷವೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸುತ್ತಿದೆ. ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಎನ್ನುವ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ೨ ವರ್ಷಗಳೊಳಗೆ ಇಡೀ ದೇಶದಲ್ಲಿ ಪ್ರತಿ ಮನೆಗೂ ಕುಡಿಯುವ ನೀರನ್ನು ನೀಡುವ ಕಾರ್ಯ ನಡೆಯಲಿದೆ. ಗ್ರಾ.ಪಂ.ಗಳಿಗೆ ನೇರವಾಗಿ ಅನುದಾನಗಳನ್ನು ನೀಡುವ ಮೂಲಕ ಸ್ಥಳೀಯಾಡಳಿತವನ್ನು ಸಶಕ್ತೀಕರಣಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು. ಕಡಬದ ಕಾರ್ಯಕ್ರಮವೂ ಸೇರಿದಂತೆ ಒಂದೇ ದಿನ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೨೦ ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಚಿವ ಅಂಗಾರ ಅವರ ಕಾರ್ಯಕ್ಕೆ ನಳಿನ್‌ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಪಿ.ವೈ.ಕುಸುಮಾ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಮರ್ದಾಳ ಗ್ರಾ.ಪಂ. ಅಧ್ಯಕ್ಷ ಹರೀಶ್ ಕೋಡಂದೂರು, ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪುತ್ತಿಲ, ಪ್ರಮುಖರಾದ ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಕಾಶ್ ಎನ್.ಕೆ., ಎ.ಬಿ.ಮನೋಹರ ರೈ, ಗಿರೀಶ್ ಎ.ಪಿ., ಸತೀಶ್ ಪೂಜಾರಿ ಐತ್ತೂರು, ಬಾಲಕೃಷ್ಣ ಬಾಣಜಾಲು, ಫಝಲ್ ಕೋಡಿಂಬಾಳ, ಮಧುಸೂದನ್ ಕೊಂಬಾರು, ಫಯಾಝ್ ಕಡಬ, ಶ್ರೀಕೃಷ್ಣ ಎಂ.ಆರ್., ನ್ಯಾಯವಾದಿ ಪ್ರಶಾಂತ್ ಪಂಜೋಡಿ, ಉಮೇಶ್ ಶೆಟ್ಟಿ ಸಾಯಿರಾಂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಎಇಇ ಶ್ರೀನಿವಾಸ ಮೂರ್ತಿ, ಸಹಾಯಕ ಇಂಜಿನಿಯರ್ ಜನಾರ್ದನ ಕೆ.ಬಿ., ಜಿ.ಪಂ. ಎಇಇ ಭರತ್ ಬಿ.ಎಂ., ಸಹಾಯಕ ಇಂಜಿನಿಯರ್ ಎಸ್‌ಎಸ್.ಹುಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.

ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ ಸ್ವಾಗತಿಸಿ, ನಿರೂಪಿಸಿದರು. ಎಪಿಎಂಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ ವಂದಿಸಿದರು.

ಜಲಜೀವನ್ ಮಿಷನ್ ಕಾಮಗಾರಿಗೆ ಚಾಲನೆ: ಮರ್ದಾಳ ವ್ಯಾಪ್ತಿಗೆ ೨.೬೦ ಕೋಟಿ ರೂ ಅನುದಾನ

ಮರ್ದಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳ್ಳಲಿರುವ ಒಟ್ಟು ೨೯.೭೫ ಲಕ್ಷ ರೂ. ಅನುದಾನದ ಕಾಮಗಾರಿಗಳು, ೨.೬೦ ಕೋಟಿ ರೂ. ಅನುದಾನದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಹಾಗೂ ೧೦ ಲಕ್ಷ ರೂ. ಅನುದಾನದ ಕೋಡಿಂಬಾಳ-ದಂಡುಗುರಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಸಚಿವ ಎಸ್.ಅಂಗಾರ ಅವರು ಚಾಲನೆ ನೀಡಿದರು.