ಗ್ರಾಮ ಲೆಕ್ಕಾಧಿಕಾರಿ ನಿವಾಸವೇ ಉಪತಹಶೀಲ್ದಾರ ಕಛೇರಿ : ಕಾರ್ಯಾಲಯಕ್ಕಿಲ್ಲ ಸ್ವಂತ ಕಟ್ಟಡ ಭಾಗ್ಯ

ಗದಗ, ಮಾ 26: ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿಯೇ ಅತೀ ದೊಡ್ಡ ಹೋಬಳಿಯಾಗಿರುವ ಪಟ್ಟಣದ ನಾಡ ಕಚೇರಿಗಿಲ್ಲ ಸ್ವಂತ ಕಟ್ಟಡ. ಗ್ರಾಮ ಲೆಕ್ಕಾಧಿಕಾರಿ ನಿವಾಸದಲ್ಲಿಯೇ ಉಪ ತಹಶೀಲ್ದಾರ ಕಚೇರಿ ಕಾರ್ಯಗಳು ನಡೆಯುತ್ತಿವೆ. ಕಂದಾಯ ಇಲಾಖೆ ಸಿಬ್ಬಂದಿಗೆ ಸೇರಿದಂತೆ ಸಾರ್ವಜನಿಕರಿಗೆ ಇಲ್ಲ ಮೂಲ ಸೌಲಭ್ಯಗಳು.
ಜಿಲ್ಲೆಯ ನರೇಗಲ್ಲ ಪಟ್ಟಣದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಉಪ ತಹಶೀಲ್ದಾರ ಕಚೇರಿಯು ಗ್ರಾಮ ಲೆಕ್ಕಾಧಿಕಾರಿಗಳ ನಿವಾಸವಾಗಿದ್ದು. ಆದರೆ, ಅವರ ಕಾರ್ಯಾಲಯ ಇರುವುದು ಗಣೇಶ ದೇವಸ್ಥಾನದ ಕೊಠಡಿಯಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಕಚೇರಿಯ ಕೆಲಸ ಕಾರ್ಯಗಳನ್ನು ಇಲ್ಲಿಂದಲೇ ನಿರ್ವಹಿಸುತ್ತಿದ್ದಾರೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳಿಗೆಂದೇ ನಿರ್ಮಾಣವಾಗಿರುವ ಅವರ ನಿವಾಸವು ನಾಡ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ಅನಿವಾರ್ಯವಾಗಿ ಕಾರ್ಯ ನಿರ್ವಹಿಸುವ ಸ್ಥಳವನ್ನು ಬಿಟ್ಟು ಬೇರೆ ಕಡೆಯಿಂದ ಬಂದು ಇಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸತ್ಯವಾದರೂ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಸುಮಾರು 77 ವರ್ಷಗಳ ಹಿಂದೆ ಕರ್ನಾಟಕ ಏಕೀಕರಣ ಸಮಯದಲ್ಲಿ ನರೇಗಲ್ಲ ಪಟ್ಟಣವನ್ನು ತಾಲೂಕ ಎಂದು ಗುರುತಿಸಲಾಗಿತ್ತು ಎನ್ನುವುದು ಪಟ್ಟಣದ ಹಿರಿಯರ ಹೇಳಿಕೆ. ಆದರೆ, ಸಾರ್ವಜನಿಕರು ಇಚ್ಛಾಶಕ್ತಿ ಕೊರತೆ ಹಾಗೂ ಜನಪತ್ರಿನಿಧಿಗಳ ನಿರ್ಲಕ್ಷ ಧೊರಣಿಯಿಂದ ಇಲ್ಲಿನ ನಾಡ ಕಚೇರಿಗೆ ಸ್ವಂತ ಕಟ್ಟಡವೆನ್ನುವುದು ಮರಿಚಿಕೆಯಾಗಿದೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ನಾಡ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಇರುವುದು ಹಾಗೂ ಇಲ್ಲಿ ಹಿರಿಯ ಅಧಿಕಾರಿಗಳು ಸಮರ್ಪಕವಾಗಿ ಖುದ್ದು ಹಾಜರಾಗಿ ಕಾರ್ಯ ನಿರ್ವಹಿಸದೇ ಇರುವುದು ಇಲ್ಲಿನ ಜನತೆ ತೀವೃ ತೊಂದರೆಯನ್ನು ಅನುಭವಿಸುವಂತಾಗಿದೆ ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕಾಗಿದೆ.

ನರೇಗಲ್ಲ ಹೋಬಳಿಗೆ ಹಾಲಕೇರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ತೊಟಗಂಟಿ, ದ್ಯಾಮಪುರ, ಕೊಚಲಾಪುರ, ಕೊಡಿಕೊಪ್ಪ, ಮಲ್ಲಾಪುರ, ಸರ್ಜಾಪುರ, ಶಾಂತಗೇರಿ, ಬೊಮ್ಮಸಾಗರ, ಚಿಕ್ಕಅಳಗುಂಡಿ, ಚಿಕ್ಕ ಅಳಗುಂಡಿ, ದ್ಯಾಮನುಸಿ, ಗುಳಗುಳಿ, ಸೂಡಿ, ಕಲ್ಲಿಗನೂರ, ಮುಸಿಗೇರಿ, ಬೇವಿನಕಟ್ಟಿ, ನೆಲ್ಲೂರ, ಶಾಂತಗೇರಿ, ನರೇಗಲ್ಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳು ಬರುತ್ತವೆ. ಈ ಗ್ರಾಮಗಳ ಜನತೆ ನಾಡ ಕಾರ್ಯಾಲಯಕ್ಕೆ ನಿತ್ಯ ಒಂದಿಲೊಂದು ಕೆಲಸ ಕಾರ್ಯಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಹೀಗೆ ಬಂದ ಸಾರ್ವಜನಿಕರಿಗೆ ಉಪ ತಹಶೀಲ್ದಾರ ಹಾಗೂ ಕಂದಾಯ ನೀರಿಕ್ಷಕರು ಇಲ್ಲದೇ ಇರುವುದರಿಂದ ಗೊಣಗುತ್ತಲೇ ಮರಳಿ ಸ್ವಗ್ರಾಮಕ್ಕೆ ತೆರಳಬೇಕು. ಕೆಲಸದ ಅವಶ್ಯಕತೆ ಅನಿವಾರ್ಯವಾಗಿದರೇ ಗಜೇಂದ್ರಗಡಕ್ಕೆ ಸಮಯ ಹಾಗೂ ಹಣ ಖರ್ಚು ಅಲ್ಲದೇ ದೈಹಿಕವಾಗಿ ಶ್ರಮಿಸಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವ ಕೆಲಸಕ್ಕಾಗಿ :
ಹೋಬಳಿ ಕೇಂದ್ರದಲ್ಲಿ ದೊರೆಯುವ ಸೇವೆಗಳಾದ ಅಲಿನೇಷನ್, ಇ ನಕ್ಷೆ, ಇ ಸ್ವತ್ತು, ಪೋಡಿ, ಹದ್ದುಬಸ್ತ್, ಜಾತಿ ಮತ್ತು ಆದಾಯ, ಆಧಾರ ಕಾರ್ಡ, ಚಿಕ್ಕ ಹಿಡುವಳಿದಾರ, ವೃದ್ದಾಪ್ಯ, ಸಂಧ್ಯಾ ಸುರಕ್ಷಾ, ವಿಶಿಷ್ಠಚೇತನರ ಮಾಶಾಸನ, ವಿಧವಾ, ಮೈತ್ರಿ, ಮನಸ್ವಿನಿ, ಅನುಕಂಪದ ಆಧಾರದ ಮೇಲೆ ನೌಕರಿಗೆ ಸಂಭಂಧಿಸಿದ ಪ್ರಮಾಣ ಪತ್ರಗಳು, ವಾರಸಾ, ರಹವಾಸಿ, ನಿವಾಸಿ, ಭೂ ಹಿಡುವಳಿದಾರ, ಬೋನೋಪೈಡ್ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಸಾರ್ವಜನಿಕರು ನಿತ್ಯ ನಾಡಕಚೇರಿಗೆ ಬರುತ್ತಾರೆ ಆದರೇ ಇಲ್ಲಿ ಉಪ ತಹಶೀಲ್ದಾರ ಹಾಗೂ ಕಂದಾಯ ನೀರಿಕ್ಷಕರು ಇಲ್ಲಿ ಸಮರ್ಪಕವಾಗಿ ವೇಳೆಗೆ ಸರಿಯಾಗಿ ಇದ್ದು ಕಾರ್ಯ ನಿರ್ವಹಿಸದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎನ್ನುವುದು ಇಲ್ಲಿಗೆ ಬಂದ ಜನತೆಯ ಅಭಿಪ್ರಾಯವಾಗಿದೆ.

ಸಾರ್ವಜನಿಕರ ಗೋಳು :
ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಇಲ್ಲಿ ಶೌಚಾಲಯವು ಇಲ್ಲದೇ ಇರುವುದರಿಂದ ಪಕ್ಕದಲ್ಲಿಯೇ ಇರುವ ಗಾಂಧಿಭವನದ ಹಿಂದುಗಡೆ ಇಲ್ಲವೆ ಗೋಡೆಗಳ ಮರೆಗೆ ಪುರುಷರು ತಮ್ಮ ದೇಹಭಾಧೆಯನ್ನು ತೀರಿಸಿಕೊಳ್ಳುವರು ಆದರೆ ಹೆಣ್ಣು ಮಕ್ಕಳಿಗೆ ಶೌಚಾಲಯವು ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮಲೆಕ್ಕಾಧಿಕಾರಿಗಳ ನಿವಾಸದ ಕಟ್ಟಡದಲ್ಲಿಯೇ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಕಚೇರಿಯ ತಾಂತ್ರಿಕ ಸಿಬ್ಬಂದಿಯ ಕೊರತೆಯು ಇಲ್ಲಾ ಆದರೇ ಹಿರಿಯ ಅಧಿಕಾರಿಗಳು ಇಲ್ಲದೇ ಇಲ್ಲಿ ಕೇವಲ ಒಬ್ಬ ಉಪತಹಶೀಲ್ದಾರ ಹಾಗೂ ಗಣಕಯಂತ್ರ ನಿರ್ವಾಹಕರು ಮಾತ್ರ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳು ಅನವಶ್ಯಕವಾಗಿ ವಿಳಂಭವಾಗುತ್ತಿವೆ. ವಿವಿಧ ಗ್ರಾಮಗಳಿಂದ ಬಂದಿರುವ ಜನತೆಗೆ ತೊಂದರೆಯಾಗುತ್ತಿದೆ. ಇದನ್ನು ನಿಗಿಸಲು ತಕ್ಷಣವೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ.ಪಂ ಮಾಜಿ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ ಒತ್ತಾಯಿಸಿದ್ದಾರೆ.

ನಾಡ ಕಚೇರಿಗೆ ಸಂಬಂಧಿಸಿದಂತೆ ಹೊಸ ಕಟ್ಟಡಕ್ಕಾಗಿ ನೀಲನಕ್ಷೆಯ ಜತೆಗೆ ಕಟ್ಟಡದ ಮಾಹಿತಿ ಸೇರಿದಂತೆ ಇಲಾಖೆ ಕೇಳಿದ ಎಲ್ಲ ದಾಖಲೆಗಳನ್ನು ಈಗಾಗಲೇ ರವಾನಿಸಲಾಗಿದೆ. ಹಳೆಯ ಕಾರ್ಯಾಲಯದ ಜಾಗದಲ್ಲಿ ಮುಂಬರುವ ದಿನಗಳಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗಜೇಂದ್ರಗಡ ತಹಶೀಲ್ದಾರ ಅಶೋಕ ಕಲಘಟಗಿ ತಿಳಿಸಿದರು.