ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹಲ್ಲೆಗೆ ಖಂಡನೆ

ಕೊಟ್ಟೂರು.ಏ,30 -ಗದಗ ಜಿಲ್ಲೆ ರೋಣ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳಾದ ಸಂದೀಪ್ ರಾಮಣ್ಣನವರ್, ಬಸವರಾಜ ಮಾದರ ಇವರು ದಿನಾಂಕ: 26.04.2021 ರಂದು ತಹಶೀಲ್ದಾರರ ನಿರ್ದೇಶನದಂತೆ ಜಮಾಬಂಧಿ ಕೆಲಸ ಮತ್ತು ಕರೋನ ಸಂಬಂಧಿತ ಕೆಲಸವನ್ನು ಮುಗಿಸಿಕೊಂಡು ರಾತ್ರಿ 8.00 ಗಂಟೆ ಸಮಯದಲ್ಲಿ ಬರುವಾಗ ದಾರಿ ಮಧ್ಯೆ ಹೋಟಲ್ ನಲ್ಲಿ ಊಟವನ್ನು ಪಾರ್ಸಲ್ ತೆಗೆದುಕೊಳ್ಳುವ ಸಮಯದಲ್ಲಿ ಸ್ಥಳಕ್ಕೆ ಬಂದ ರೋಣ ಪಿಎಸ್ಐ ವಿನೋದ್ ಕುಮಾರ್ ಮತ್ತು ವಾಹನ ಚಾಲಕ ಮಂಜುನಾಥ ಇವರು ವಿಚಾರಿಸದೇ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಕಂದಾಯ ಇಲಾಖೆಯ ಸಿಬ್ಬಂದಿ ಎಂದು ಗುರುತಿನ ಚೀಟಿಯನ್ನು ತೋರಿಸಿದರೂ ಲೆಕ್ಕಿಸದೇ ಲಾಟಿಯಿಂದ ಮನಸಾಇಚ್ಛೆ ಥಳಿಸಿರುತ್ತಾರೆ. ಕೊರೋನಾ ನಿಯಂತ್ರಣ ಸಲುವಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿಯ ಮೇಲೆ ವಿನಾಕಾರಣ ಈ ರೀತಿ ಖೈದಿಗಳಂತೆ ಥಳಿಸಿ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವುದನ್ನು ಕೊಟ್ಟೂರು ತಾಲೂಕಿನ ಗ್ರಾಮ ಲೆಕ್ಕಿಗರ ಸಂಘವು ತೀವ್ರವಾಗಿ ಖಂಡಿಸಿ , ತಪ್ಪಿತಸ್ಧರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು, ಜಿಲ್ಲಾ ಘಟಕದಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ.
ಈ ಸಮಯದಲ್ಲಿ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾದ ಕೊಟ್ರೇಶ್ ಬಿ, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾದ ಎಸ್ ವಿ ಬಸವರಾಜ, ಖಜಾಂಚಿ ಮಲ್ಲೇಶ್, ಗ್ರಾಮ ಲೆಕ್ಕಿಗರಾದ ಶರಣಬಸವೇಶ, ಸಿದ್ದಲಿಂಗೇಶ, ಆಶಾ ಎಂ, ಮಂಗಳವಾಲಿ, ಬಸಮ್ಮ, ಸುನಿತ ಯು ಎಂ, ಮಮತಾ, ಕೊಟ್ರಮ್ಮ, ಕಂದಾಯ ನಿರೀಕ್ಷಕರು ಹಾಲಸ್ವಾಮಿ, ಸಿ ಮ ಗುರುಬಸವರಾಜ ಹಾಗೂ ಇತರರು ಇದ್ದರು