ಗ್ರಾಮ ಮಟ್ಟದಲ್ಲಿ ೨ ದಿನಗಳಿಗೊಮ್ಮೆ ಟಾಸ್ಕ್ ಪೋರ್ಸ್ ಸಭೆ-ಕೋಟಾ

ಸುಳ್ಯದಲ್ಲಿ ಕೊರೋನಾ ನಿಯಂತ್ರಣದ ಕುರಿತು ಅಧಿಕಾರಿಗಳ ಸಮಾಲೋಚನಾ ಸಭೆ
ಸುಳ್ಯ, ಮೇ ೨-ಒಂದು ಮನೆಯ ಎಲ್ಲರಿಗೂ ಪಾಸಿಟಿವ್ ಬಂದರೆ ಆ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಸ್ಥಳಿಯ ಗ್ರಾಮ ಪಂಚಾಯಿತಿ ಅವರನ್ನು ನೋಡುವ ಅವರಿಗೆ ದಿನಸಿ ಇನ್ನಿತರ ಕೊಂಡುಹೋಗಿ ಕೊಡುವ ವ್ಯವಸ್ಥೆ ಮಾಡಬೇಕು. ಪ್ರತಿದಿನವೂ ಅವರ ಸಂಪರ್ಕದಲ್ಲಿರಬೇಕು. ಗ್ರಾಮ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯವರು ೨ ದಿನಕ್ಕೊಮ್ಮೆ ಸಭೆ ನಡೆಸಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊರೋನಾ ನಿಯಂತ್ರಣದ ಕುರಿತು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ನಿಯಂತ್ರಣಕ್ಕೆ ಅಧಿಕರಿಗಳೊಂದಿಗೆ ಜನರು ಸಹಕರಿಸಬೇಕು. ಆರೋಗ್ಯ ಇಲಾಖೆ ಮಾತ್ರ ಕೆಲಸ ಮಡುವುದಲ್ಲ. ಎಲ್ಲಾ ಇಲಾಖೆಯ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್‌ರವರು ಸುಳ್ಯದಲ್ಲಿ ಸಕ್ರಿಯ ೨೦೨ ಕೊರೋನಾ ಪ್ರಕರಣಗಳಿವೆ. ಅದರಲ್ಲಿ ೧೮೮ ಮಂದಿ ಹೋಂ ಐಸೋಲೇಶನ್‌ನಲ್ಲಿದ್ದರೆ, ೧೩ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೈಮರಿ ಕಾಂಟೆಕ್ಟ್ ೧೦೩೦ ಮಂದಿ ಲಿಸ್ಟ್ ಮಾಡಲಾಗಿದೆ.ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ನವರು
ಕೋವಿಡ್ ಬಂದವರ ಮನೆ ಭೇಟಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತ ನಿರ್ದೇಶಕ ಡಾ. ಕೆ.ವಿ.ಚಿದಾನಂದರು ಕೆವಿಜಿ ಆಸ್ಪತ್ರೆಯಲ್ಲಿ ಬೆಡ್‌ಗಳು, ವೆಂಟಿಲೇಟರ್, ಆಕ್ಸಿಜನ್ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ವಿ. ಕರುಣಾಕರರವು ತಾಲೂಕು ಆಸ್ಪತ್ರೆಯ ಕೊರೋನಾ ನಿಯಂತ್ರಣ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು. ಎಲ್ಲರ ಮಾತುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸುಳ್ಯದ ಮೆಡಿಕಲ್ ಕಾಲೇಜಿನಲ್ಲಿ ಇಷ್ಟು ಸವಲತ್ತುಗಳಿವೆ. ಇದನ್ನು ನಾವು ಬಳಸಿಕೊಳ್ಳಬೇಕು. .ಒಂದು ಮನೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದರೆ ಆ ವ್ಯಕ್ತಿ ಸಫರೇಟ್ ಆಗಿ ವಾಸಿಸಲು ಬೇಕಾದಂತಹ ವ್ಯವಸ್ಥೆ ಇದ್ದರೆ ಮಾತ್ರ ಹೋಂ ಐಸೋಲೇಶನ್ ಮಾಡಬೇಕು. ಇಲ್ಲವಾದರೆ ಕೊರೋನಾ ಸೆಂಟರ್‌ನಲ್ಲಿ ವ್ಯವಸ್ಥೆ ಮಾಡಬೇಕು. ಅಲ್ಲಿ ಆ ಪೇಷೆಂಟ್‌ಗೆ ಎಲ್ಲಾ ಸೌಲಭ್ಯವನ್ನು ಸರಕಾರ ನೀಡುತ್ತದೆ. ದಿನಕ್ಕೆ ೨೫೦ ರೂ. ಆಹಾರಕ್ಕಾಗಿ ನೀಡಲಾಗುತ್ತದೆ ಎಂದು ಹೇಳಿದರು. ಕೊರೋನಾ ನಿಯಂತ್ರಣ ಆರೋಗ್ಯ ಇಲಾಖೆಯ ಮಾತ್ರ ಜವಾಬ್ದಾರಿಯಲ್ಲ. ಅದು ತಾಲೂಕಿನ ಎಲ್ಲಾ ಇಲಾಖೆಯ ಸಿಬ್ಬಂದಿಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಮೀನುಗಾರಿಕಾ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರರು ಮಾತನಾಡಿ, ಕಳೆದ ಬಾರಿ ಕೊರೋನಾ ಆರಂಭಗೊಂಡಾಗ ಎಲ್ಲರೂ ಜಾಗೃತರಾಗಿದ್ದರು. ಈ ಬಾರಿ ಜನರಲ್ಲಿ ಭಯವೇ ಇಲ್ಲ. ಹಿಂದಿನ ವಾತಾವರಣ ಬಂದು ಜನರಲ್ಲಿ ಭಯ ಬಂದಾಗ ಕೊರೋನಾ ನಿಯಂತ್ರಸಬಹುದು ಎಂದು ಅವರು ಹೇಳಿದರು. ಸಭೆಯ ಬಳಿಕ ಜಿಲ್ಲಾಧಿಕಾರಿಗಳ ತಂಡ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಂಸದ ನಳಿನ್‌ಕುಮಾರ್ ಕಟೀಲ್, ಜಿ.ಪಂ. ಸಿ.ಎಸ್. ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನೆಮನೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷ ವಿನಯ ಕಂದಡ್ಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.