ಗ್ರಾಮ ಮಟ್ಟದಲ್ಲಿ ಜನತಾದಳ ಕಟ್ಟಲು ಪಾಟೀಲ್ ಕರೆ

ವಿಜಯಪುರ, ಸೆ.21-ವಿಜಯಪುರ ಜಿಲ್ಲಾ ಜನತಾದಳ (ಜಾ) ಜಿಲ್ಲಾ ಘಟಕದ ಆಶ್ರಯದಲ್ಲಿ ಜಿಲ್ಲೆಯ ಮೂರು ತಾಲೂಕುಗಳಾದ ಮುದ್ದೇಬಿಹಾಳ, ತಾಳಿಕೋಟಿ, ದೇವರ ಹಿಪ್ಪರಗಿ ತಾಲೂಕುಗಳ ನೂತನ ತಾಲೂಕಾ ಅಧ್ಯಕ್ಷರುಗಳ ಮತ್ತು ಆ ತಾಲೂಕಿನಲ್ಲಿ ಬರತಕ್ಕಂತಹ ನೂತನ ಜಿಲ್ಲಾ ಪದಾಧಿಕಾರಿಗಳ ವಿಧಾನ ಸಭಾ ಪರಾಜಿತ ಅಭ್ಯರ್ಥಿಗಳ ಸಭೆಯು ದಿ.19-09-2020ರಂದು ಮುಂಜಾನೆ 11 ಗಂಟೆಗೆ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಯಂಡಿಗೇರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಭೆಯಲ್ಲಿ ಆಯಾ ತಾಲೂಕುಗಳಲ್ಲಿ ಪಕ್ಷದ ಸಂಘಟನೆಯನ್ನು ಕ್ರೀಯಾತ್ಮಕವಾಗಿ ಕೆಳಹಂತದಿಂದ ಹಾಗೂ ಗ್ರಾಮಮಟ್ಟದಿಂದ ಸಂಘಟಿಸುವ ಕುರಿತು ಸುಧೀರ್ಘವಾಗಿ ಚರ್ಚೆ ಮಾಡಲಾಯಿತು.
ಕೋವಿಡ್‍ನ ಈ ಸಂಕಷ್ಟದ ಸಮಯದಲ್ಲಿ ಮೂರು ತಾಲೂಕುಗಳಂತೆ ಸಭೆಯನ್ನು ಕರೆದು ಚರ್ಚಿಸಲು ಸಂಘಟಿಸಲು ನಿರ್ಣಯಿಸಿದಂತೆ ಈ ತಾಲೂಕುಗಳಲ್ಲಿ ನೂತನವಾಗಿ ನೇಮಕಗೊಂಡ ತಾಲೂಕಾ ಅಧ್ಯಕ್ಷರು, ಜಿಲ್ಲಾ ಜನತಾದಳದ ಪದಾಧಿಕಾರಿಗಳು ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಹಲವಾರು ಮುಖಂಡರುಗಳಾದ ರಾಜುಗೌಡ ಪಾಟೀಲ್, ಶ್ರೀಮತಿ ಮಂಗಳಾ ಬಿರದಾರ ಸೂಚಿಸಿದರು.
ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಬಸನಗೌಡ ಮಾಡಗಿ, ಗುರು ದೇಶಮುಖ ಮಾತನಾಡಿ, ನಮ್ಮ ನಮ್ಮ ತಾಲೂಕುಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಸಣ್ಣ ಪುಟ್ಟ ಭಿನ್ನಾಬಿಪ್ರಾಯಗಳಿದ್ದರೂ ಕೂಡಾ ಅವುಗಳೆಲ್ಲವನ್ನು ಮರೆತು ಒಕ್ಕಟ್ಟಿನಿಂದ ಪಕ್ಷವನ್ನು ಕಟ್ಟಬೇಕಾಗಿದೆ ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಸಲಹೆ ನೀಡಿದರು.
ಅರವಿಂದ ಕಾಶಿನಕುಂಟೆ, ಪ್ರದೀಶ ದೇಶಪಾಂಡೆ ಮಾತನಾಡಿ, ಪಕ್ಷದ ಕಾರ್ಯಕರ್ತರುಗಳು ಸಂಘಟನೆಯಲ್ಲಿ ಚಾಕಚಕ್ಕತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡು ಪಕ್ಷವನ್ನು ಕಟ್ಟುವುದಲ್ಲದೇ ಜಿಲ್ಲಾ ಘಟಕ ಸೂಚಿಸುವ ಸಲಹೆ ಸೂಚನೆಗಳ ಆಧಾರದ ಮೇಲೆ ಪಕ್ಷ ಸಂಘಟಿಸಬೇಕು ಮತ್ತು ಕುಮಾರಸ್ವಾಮಿಯವರು ರೈತಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಮತದಾರರಿಗೆ ಮತ್ತು ಹಳ್ಳಿಗಳಿಗೆ ತಲುಪುವಂತೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.
ಈ ಪಕ್ಷ ಕಟ್ಟಬೇಕಾಗಿರತಕ್ಕಂತಹ ಈ ಸಂದರ್ಭದಲ್ಲಿ ನಾವೆಲ್ಲರು ಜಿಲ್ಲೆಯಲ್ಲಿ ಒಮ್ಮನಸ್ಸಿನಿಂದ ಒಕ್ಕಟ್ಟಿನಿಂದ ಸಕಾರಾತ್ಮಕವಾಗಿ ಪಕ್ಷ ಕಟ್ಟಲು ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳು ತಾಲೂಕಾ ಅಧ್ಯಕ್ಷರುಗಳು ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸ್ವಇಚ್ಛೆಯಿಂದ ಪಾಲ್ಗೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರುಗಳು ಸಂಘಟನೆಗೆ ನಿಮ್ಮನ್ನು ನೀವು ಅನಿಗೊಳಿಸಬೇಕಾಗಿದೆ. ಈಗಾಗಲೇ ರಾಜ್ಯದಲ್ಲಿ ಅಕ್ರಮವಾಗಿ ಸರ್ಕಾರ ರಚಿಸಿ ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಅಧಿಕಾರ ನಡೆಸುತ್ತಿರುವ ಬಿ.ಜೆ.ಪಿ. ಸರ್ಕಾರವು ಆಡಳಿತ ನಡೆಸಲು ವಿಫಲವಾಗಿದೆ. ಕೋವಿಡ್ ಸಂಕಷ್ಟದಲ್ಲಿ ರಾಜ್ಯದ ರೈತರು ಕೂಲಿಕಾರರು, ಬಡವರು ಅತ್ಯಂತ ಕಷ್ಟದಲ್ಲಿ ಇರತಕ್ಕಂತಹ ಈ ಕೆಟ್ಟ ಸಮಯದಲ್ಲಿ ಅವರ ಸಹಾಯಕ್ಕೆ ಬರದೆ ಕೋವಿಡ್‍ನಂತಹ ಮಹಾಮಾರಿಯ ಸಂದರ್ಭವನ್ನು ಬಳಸಿಕೊಂಡು ಬ್ರಷ್ಟಾಚಾರ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯವೆಂದು ಅಧ್ಯಕ್ಷತೆವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಯಂಡಿಗೇರಿ ಕಟುವಾಗಿ ಟೀಕಿಸಿದರು.
ರಾಜ್ಯದಲ್ಲಿ ಬಾರಿ ಮಳೆಯಾಗಿದ್ದು ರೈತರಿಗೆ ಸರಿಯಾದ ರೀತಿಯಲ್ಲಿ ಗೊಬ್ಬರ ಸಿಗದೆ ಪರದಾಡುವಂತಹ ಸಂದರ್ಭದಲ್ಲಿ ಗೊಬ್ಬರ ಮಾರುವ ವ್ಯಾಪಾರಸ್ತರು ದುಬಾರಿ ಬೆಲೆಯಲ್ಲಿ ರೈತರನ್ನು ಶೋಷಿಸುತ್ತಿರುವುದು ಖಂಡನಿಯ. ಕಳೆದ 1 ತಿಂಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳದ ಬೆಳೆ ಹಾಳಾಗುವ ಆತಂಕದಲ್ಲಿ ಜಿಲ್ಲೆಯಲ್ಲಿ ರೈತರಿದ್ದಾರೆ. ತಕ್ಷಣವೆ ಅವರ ಸಹಾಯಕ್ಕೆ ಸರ್ಕಾರ ಮುಂದಾಗಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಕೋರೊನಾ ಹಾವಳಿ ಜಾಸ್ತಿಯಾಗಿದ್ದು ಇದಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಯವರು ಸರಿಯಾಗಿ ಸ್ಫಂದಿಸದೆ ಕಾಯಿಲೆಗೆ ತುತ್ತಾದವರು ಭಯದಿಂದ ಸಾಯುವಂತಾಗಿದೆ. ಮತ್ತು ಖಾಸಗಿ ಆಸ್ಪತ್ರೆಯವರು ಕೋರೊನಾ ನೆಪದಲ್ಲಿ ಲಕ್ಷ ಲಕ್ಷ ರೂಪಾಯಿಗಳ ಬಿಲ್ಲನ್ನು ಮಾಡಿ ರೋಗಿಗಳನ್ನು ಶೋಷನೆ ಮಾಡುತ್ತಿದ್ದಾರೆ. ಈ ಕಡೆ ಗಮನ ಹರಿಸಿ ಜಿಲ್ಲಾಡಳಿತ ಕ್ರಮ ಕೈಕೊಳ್ಳಬೇಕೆಂದು ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಕೊಳ್ಳಲಾಯಿತೆಂದು ಯಂಡಿಗೇರಿಯವರು ತಿಳಿಸಿದರು.
ಮೊದಲಿಗೆ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠರವರು ಎಲ್ಲರನ್ನು ಸ್ವಾಗತಿಸಿದರು. ಜಿಲ್ಲಾ ವಕ್ತಾರರಾದ ಎಸ್.ಎಸ್. ಖಾದ್ರಿಇನಾಮದಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯ ಉದ್ದೇಶವನ್ನು ಸಭೆಗೆ ತಿಳಿಸಿದರು.
ಈ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ದಿಲಾವರ್ ಖಾಜಿ, ಸಿದ್ದು ಕಾಮತ, ಮಹಾದೇವಿ ಪಾಟೀಲ, ತಾಲೂಕಾ ಅಧ್ಯಕ್ಷರುಗಳಾದ ಪ್ರಭುಗೌಡ ಪಾಟೀಲ, ನಾನಗೌಡ ಅನಂತರೆಡ್ಡಿ, ಸಾಯಬಣ್ಣ ಬಾಗೇವಾಡಿ, ಬಸನಗೌಡ ಬಿರಾದಾರ, ಬಸನಗೌಡ ಇಸಾಂಪುರ, ನದೀಮ ಕಡು, ಎಸ್.ಎಸ್. ಪಾಟೀಲ, ಶರಣು ಧರಿ, ಪ್ರಹ್ಲಾದಸಿಂಗ್ ಹಜೇರಿ, ಸಂಗಣ್ಣ ಡಂಬಳ, ಭೀಮನಗೌಡ ಪಡಗಾನೂರ, ಕೃಷ್ಣಾ ರಾಠೋಡ, ಯಲಗೂರೇಶ ತೊಂಡಿಕಟ್ಟಿ, ಎಮ್.ಬಿ. ಕೊಡಗಲಿ, ಸಿದ್ದು ಮೇಲಿನಮನಿ, ಗೌಸ ಮನಿಯಾರ, ಅನ್ನಪೂರ್ಣ ಬಡಿಗೇರ, ಶ್ರೀಶೈಲ ಬಿಕ್ಷವತಿಮಠ, ವಿಠ್ಠಲಸಿಂಗ್ ಹಜೇರಿ, ಎಸ್.ಎಸ್. ಪಾಟೀಲ್ ತಾಳಿಕೋಟ, ಸೈದಾಬಿ ಚಿತ್ತರಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಮಾರಿ ವಿಜಯಲಕ್ಷ್ಮೀ ಪಾಟೀಲ್ ಮತ್ತು ಅವರೊಂದಿಗೆ 20 ಯುವತಿಯರು ಪಕ್ಷಕ್ಕೆ ಸೇರ್ಪಡೆಯಾದರು. ಮತ್ತು ನೂತನವಾಗಿ ನೇಮಕಗೊಂಡ ತಾಲೂಕಾ ಅಧ್ಯಕ್ಷರುಗಳಿಗೆ ಆದೇಶ ಪತ್ರವನ್ನು ನೀಡಿ ಸನ್ಮಾನಿಸಿದರು.