ಗ್ರಾಮ ಪಂ.ಕಛೇರಿಯಲ್ಲಿ ನೆಟ್ ವರ್ಕ್ ಸಮಸ್ಯೆ: ಸಾರ್ವಜನಿಕರ ಅಲೆದಾಟ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಮೇ 25 :- ಚಿಕ್ಕಲ್ಲೂರು ಗ್ರಾಮ ಪಂಚಾಯತ್ ಕೇಂದ್ರ ಸ್ಧಾನ ಕೊತ್ತನೂರು ಗ್ರಾಮದ ಪಂ. ಕಚೇರಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು ದಿನನಿತ್ಯ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕೊತ್ತನೂರು ಗ್ರಾಮದ ಪಂಚಾಯತ್ ಕಚೇರಿಯಲ್ಲಿ ಕಳೆದ 15 ದಿನಗಳಿಂದ ನೆಟ್ವರ್ಕ್ ಸಮಸ್ಯೆಯಿಂದ ಇ ಸ್ವತ್ತು, ಕಂದಾಯ ದಾಖಲೆಗಳು ಸೇರಿದಂತೆ ಸಾರ್ವಜನಿಕರಿಗೆ ಬೇಕಾದಂತಹ ಮೂಲ ದಾಖಲಾತಿ ಮಾಹಿತಿ ಪಡೆಯಲು ತೊಂದರೆಯಾಗಿದೆ.
ಕಚೇರಿಯಲ್ಲಿನ ಸಿಬ್ಬಂದಿಗಳು ನೆಟ್ವರ್ಕ್ ಸಮಸ್ಯೆ ನೆಪ ಮಾಡಿಕೊಂಡು ಕಚೇರಿಯಲ್ಲಿ ವ್ಯರ್ಥವಾಗಿ ಕಾಲ ಕಳೆಯುವಂತಾಗಿದೆ. ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲು ಮುಂದಾಗದ ಪಿಡಿಓ ನಿರ್ಲಕ್ಷ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಕಚೇರಿಯಲ್ಲಿ ಕಳೆದ 15 ದಿನಗಳಿಂದ ನೆಟ್ವರ್ಕ್ ಸಮಸ್ಯೆಯಾಗಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ತಿಳಿಸಿ ಕ್ರಮ ಕೈಗೊಳ್ಳಲು ನಿರ್ಲಕ್ಷ ತೋರಿದ್ದಾರೆ ಎಂದು ಕೊತ್ತನೂರು ರಾಜಶೇಖರ್ ಪತ್ರಿಕೆಗೆ ತಿಳಿಸಿದ್ದಾರೆ.
ಗ್ರಾಮ ಪಂ ಕಛೇರಿಯ ಸುತ್ತ ಮುತ್ತ ತ್ಯಾಜ್ಯ :-
ಚಿಕ್ಕಲ್ಲೂರು (ಕೊತ್ತನೂರು) ಗ್ರಾಮದ ಪಂಚಾಯತ್ ಕಚೇರಿಯ ಅವರಣಲ್ಲಿ ಗಿಡ ಗಂಟೆಗಳು ಬೆಳೆದು ಕ್ರಿಮಿ ಕೀಟಗಳು ಹಾವು ಚೇಳುಗಳ ವಾಸಸ್ಥಾನವಾಗಿದೆ. ದಿನನಿತ್ಯ ಕಚೇರಿಯಲ್ಲಿರುವ ಸಿಬ್ಬಂದಿಗಳು ಇದರ ಬಗ್ಗೆ ಗಮನಹರಿಸದೆ ನಮಗೂ ಇದಕ್ಕೂ ಸಂಬಂಧವಿಲ್ಲವೇನು ಎಂಬಂತೆ ಸ್ವಚ್ಛತೆ ಬಗ್ಗೆ ಗಮನ ಹರಿಸದಿರುವುದು ಸೋಜಿಗದ ಸಂಗತಿ.
ಕಚೇರಿಯ ಆವರಣದ ಸುತ್ತಮುತ್ತಲೆ ಸ್ವಚ್ಛತೆ ಬಗ್ಗೆ ಗಮನಹರಿಸಿದ ಗ್ರಾಮ ಪಂ. ಆಡಳಿತ ವ್ಯವಸ್ಥೆಯು ಇನ್ನು ಗ್ರಾಮಗಳಲ್ಲಿ ಗ್ರಾಮ ಪಂ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸ್ವಚ್ಛತೆ ಬಗ್ಗೆ ಎಷ್ಟು ಗಮನಹರಿಸುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇನ್ನಾದರೂ ಈ ಬಗ್ಗೆ ಗ್ರಾಮ ಪಂ. ಆಡಳಿತ ಗಮನಹರಿಸಿ ಮೊದಲು ಗ್ರಾಮ ಪಂ. ಕಛೇರಿ ಸುತ್ತಮುತ್ತ ಬೆಳೆದಿರುವ ಗಿಡ ಗಂಟಿಗಳನ್ನು ತೆರವು ಮಾಡಿ ಸ್ವಚ್ಛತೆ ಕಾಪಾಡಬೇಕಾಗಿದೆ.