ಗ್ರಾಮ ಪಂಚಾಯ್ತಿಗಳಿಗೆ ಸೋಲಾರ್: ಈಶ್ವರಪ್ಪ


ಬೆಂಗಳೂರು, ಏ. ೭- ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳ ವಿದ್ಯುತ್ ಕಣ್ಮುಚ್ಚಾಲೆ ಸಮಸ್ಯೆಗಳಿಗೆ ತೆರೆ ಎಳೆಯಲು ಎಲ್ಲ ಗ್ರಾ.ಪಂ.ಗೆ ಸೋಲಾರ್ ಅಳವಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಗ್ರಾಮ ಪಂಚಾಯ್ತಿ ಕಛೇರಿಗಳಿಗೆ ಕೆಲ ದಾಖಲೆಗಳನ್ನು ಕೇಳಿದಾಗ ವಿದ್ಯುತ್ ಇಲ್ಲ ಎಂದು ವಿಳಂಬ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಸಮಸ್ಯೆಗೆ ತೆರೆ ಎಳೆಯಲು ಎಲ್ಲ ಗ್ರಾಮ ಪಂಚಾಯ್ತಿಗಳಿಗೂ ಸೋಲಾರ್ ಅಳವಡಿಸಲಾಗುತ್ತಿದೆ ಎಂದರು.
ಈ ಸೋಲಾರ್ ಅಳವಡಿಕೆ ನಂತರ ರೈತರು ಯಾವುದೇ ದಾಖಲೆಗಳನ್ನು ಕೇಳಿ ಗ್ರಾಮ ಪಂಚಾಯ್ತಿಗಳಿಗೆ ಬೆಳಗ್ಗೆ ಅರ್ಜಿ ಸಲ್ಲಿಸಿದರೆ ಅವರಿಗೆ ಸಂಜೆಯ ವೇಳೆಗೆ ದಾಖಲೆಗಳನ್ನು ನೀಡುವ ವ್ಯವಸ್ಥೆ ಆಗುತ್ತದೆ ಎಂದು ಅವರು ಹೇಳಿದರು. ಇದರಿಂದ ದಾಖಲೆಗಳಿಗಾಗಿ ರೈತರು ದಿನಗಟ್ಟಲೆ ಕಾಯುವುದು ತಪ್ಪಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಗ್ರಾಮ ಪಂಚಾಯ್ತಿ ಕಛೇರಿ, ಕಟ್ಟಡ ಹಾಗೂ ಬೀದಿ ದೀಪಗಳಿಗೆ ಸೋಲಾರ್ ಅಳವಡಿಸುವ ಮೂಲಕ ವಿದ್ಯುತ್ ಸ್ವಾವಲಂಬಿ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯ್ತಿಗಳ ಆಸ್ತಿಗಳ ಡಿಜಟಲೀಕರಣಕ್ಕೂ ಗಮನ ನೀಡಲಾಗಿದೆ. ಪ್ರಥಮ ಹಂತದಲ್ಲಿ ರಾಜ್ಯದ ಆರು ಜಿಲ್ಲೆಗಳಲ್ಲಿ ಸ್ವಮಿತ್ವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಡ್ರೋಣ್ ಮೂಲಕ ಆಸ್ತಿಗಳ ಅಳತೆ ಮಾಡಿ ಆಸ್ತಿ ಮಾಲೀಕರಿಗೆ ಡಿಜಿಟಲ್ ಕಾರ್ಡ್ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಹೊಸದಾಗಿ ಆಯ್ಕೆಯಾದ ಎಲ್ಲ ಸದಸ್ಯರಿಗೂ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಮೇ ೧೫ರ ವೇಳೆಗೆ ಎಲ್ಲ ಸದಸ್ಯರಿಗೂ ತರಬೇತಿ ನೀಡುವ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ನರೇಗಾ ಯೋಜನೆಯಡಿ ಈ ವರ್ಷ ಒಟ್ಟು ೨.೩೭ ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ೧.೮೦ ಕಾಮಗಾರಿಗಳು ಪೂರ್ಣಗೊಂಡಿವೆ. ಶೇ. ೩೨.೯ ರಷ್ಟು ಮಾನವ ದಿನಗಳ ಸೃಜಿಸಲಾಗಿದೆ. ಈ ವರ್ಷ ೩೯೭೦.೯೪ ಕೋಟಿ ರೂ. ಕೂಲಿ ಪಾವತಿಸಲಾಗಿದೆ ಎಂದರು.
ರೈತರ ಜಮೀನಿನಲ್ಲಿ ಈ ವರ್ಷ ೧,೫೪,೯೯೯ ಬದು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ೫೦ ಸಾವಿರ ಬದು ನಿರ್ಮಾಣ ಮಾಡಲಾಗಿತ್ತು. ಹಾಗೆಯೇ ಈ ವರ್ಷ ರಾಜ್ಯದಲ್ಲಿ ೭೬೦೮೭ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ೩೦೦೫೦ ಕೃಷಿ ಹೊಂಡ ನಿರ್ಮಿಸಲಾಗಿತ್ತು. ದನದ ಕೊಟ್ಟಿಗೆ ಈ ವರ್ಷದ ೬೭,೧೦೬ ದನದ ಕೊಟ್ಟಿಗೆ, ೨,೬೨,೭೩೪ ಬಚ್ಚಲು ಗುಂಡಿ, ೧೪,೭೫೭ ಚೆಕ್ ಡ್ಯಾಂ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕದ ನೆರೆಯಿಂದ ಹಾನಿಗೊಳಾದ ಪ್ರದೇಶಗಳಲ್ಲಿ ರಸ್ತೆ ಹಾಗೂ ಸೇತುವೆಗಳ ಪುನರ್ ನಿರ್ಮಾಣ ಕಾರ್ಯವನ್ನು ೧೫೮೬ ಕೋಟಿ ರೂ.ಗ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇದವರೆಗೂ ೮೯೭ ಕೋಟಿ ರೂ.ಗಳನ್ನು ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ ಎಂದರು.
ಪ್ರಧಾನಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ ಬ್ಯಾಚ್ ೧ರಡಿ ೩೨೨೬.೨೧ ಕಿ.ಮೀ. ಉದ್ದದ ರಸ್ತೆ ಹಾಗೂ ೨೬ ಸೇತುವೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಬ್ಯಾಚ್ ೨ರ ಅಡಿಯಲ್ಲಿ ೨೨೦೪ ಕಿ.ಮೀ. ಉದ್ದದರಸ್ತೆಗಳು ಮತ್ತು ೭೫ ಸೇತುವೆಗಳನ್ನು ೧೮೪೮. ೯೫ ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಡತ ವಿಲೇವಾರಿಗೂ ಆದ್ಯತೆ ನೀಡಿದ್ದು, ಕಳೆದ ಎರಡು ವರ್ಷಗಳಲ್ಲಿ ೧೧,೪೦೯ ಕಡತಗಳ ವಿಲೇವಾರಿ ಮಾಡಲಾಗಿದೆ. ಇಲಾಖೆಯಲ್ಲಿ ಬಾಕಿ ಇರುವ ಕಡತಗಳು ಕೇವಲ ೧೬೪೨ ಮಾತ್ರ ಎಂದು ಅವರು ಹೇಳಿದರು.