ಗ್ರಾಮ ಪಂಚಾಯ್ತಿಗಳಿಗೆ ನಾಳೆ ಸಮರ

ಬೆಂಗಳೂರು, ಡಿ. ೨೧- ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಭದ್ರಬುನಾದಿ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಕೊನೆಕ್ಷಣದಲ್ಲಿ ಮತದಾರರ ಮನಗೆಲ್ಲಲು ಅಭ್ಯರ್ಥಿಗಳು ನಾನಾರೀತಿಯ ಕಸರತ್ತು ನಡೆಸಿದ್ದಾರೆ.
ಪಕ್ಷ ಆಧಾರಿತ ಚುನಾವಣೆಯಲ್ಲದಿದ್ದರೂ ಮೂರು ಪ್ರಮುಖ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಜಯಕ್ಕೆ ತೆರೆಮರೆಯಲ್ಲಿ ಕಸರತ್ತು ನಡೆಸಿರುವುದು ದಿಟ.
ನಾಳೆ ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ನಾಳೆ ರಾಜ್ಯದ ೧೧೭ ತಾಲ್ಲೂಕುಗಳ ೩,೦೧೯ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, 117383 ಅಭ್ಯರ್ಥಿಗಳ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ.
ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಬಹಿರಂಗ ಪ್ರಚಾರ ನಿನ್ನೆ ಸಂಜೆಯೇ ಅಂತ್ಯವಾಗಿದ್ದು, ಮತದಾರರು ಇಂದು ಕೊನೆಗಳಿಗೆಯಲ್ಲಿ ಮನೆಮನೆಗೆ ತೆರಳಿ ಮತದಾರರನ್ನು ಓಲೈಸುವ ಕಸರತ್ತು ನಡೆಸಿದ್ದಾರೆ.
ಈ ಹಳ್ಳಿ ಸಮರ ರಾಜಕೀಯ ಪಕ್ಷಗಳಿಗೆ ಬೇರುಮಟ್ಟದಲ್ಲಿ ಪಕ್ಷ ಬಲವರ್ಧನೆ ದೃಷ್ಟಿಯಿಂದ ಮಹತ್ವವಾಗಿರುವುದರಿಂದ ಈ ಚುನಾವಣೆ ಪಕ್ಷಾತೀತ ಎಂದು ಹೇಳಲಾಗಿದ್ದರೂ, ಆಯಾರಾಜಕೀಯ ಪಕ್ಷಗಳು ತಮ್ಮ ಜೊತೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳನ್ನು ತೆರೆಮರೆಯಲ್ಲಿ ಬೆಂಬಲಿಸುವ ಕೆಲಸ ಮಾಡುತ್ತಿವೆ.
ಮತದಾರರನ್ನು ಓಲೈಸಿಕೊಳ್ಳಲು ಎಲ್ಲಾ ರೀತಿಯ ಅಸ್ತ್ರಗಳನ್ನು ಅಭ್ಯರ್ಥಿಗಳು ಬಳಸಿದ್ದು, ಕೆಲವೆಡೆ ಗುಟ್ಟಾಗಿ ಮತದಾರರಿಗೆ ಉಡುಗೊರೆಯನ್ನು ಹಂಚಿರುವ ಪ್ರಕರಣಗಳು ವರದಿಯಾಗಿವೆ. ಕೆಲವೆಡೆ ಅಭ್ಯರ್ಥಿಗಳು ಬಾಡೂಟ ನಡೆಸಿ ಮತದಾರರ ಮನವೊಲಿಸುವ ಕೆಲಸ ಮಾಡಿದ್ದರೆ, ಇನ್ನೂ ಕೆಲ ಅಭ್ಯರ್ಥಿಗಳು, ಮದ್ಯ ಮತ್ತು ಹಣ ಹಂಚಿ ಮತದಾರರನ್ನು ಸೆಳೆಯುವ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದ ೧೧೭ ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳ ೪೮,೦೪೮ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿರುವುದರಿಂದ 43,238 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದ್ದು, 117387 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
432 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿವೆ.
ಮೊದಲ ಹಂತದ ಗ್ರಾಮ ಪಂಚಾಯಿತಿಯ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಕಾರ್ಯಕ್ಕಾಗಿ ೫,೮೪೭ ಚುನಾವಣಾಧಿಕಾರಿಗಳು ಹಾಗೂ ೬,೦೮೫ ಸಹಾಯಕ ಚುನಾವಣಾಧಿಕಾರಿಗಳು ಸುಮಾರು 2,70,268 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಇವರ ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇವರುಗಳು, ಮತದಾರರು ಮಾಸ್ಕ್ ಧರಿಸುವುದನ್ನು ಗಮನಿಸುವುದರ ಜೊತೆಗೆ, ಮತದಾನಕ್ಕೂ ಮೊದಲು ಮತದಾರರು ಮತಗಟ್ಟೆ ಪ್ರವೇಶಿಸುವ ಮುನ್ನ ಕೈಗಳನ್ನು ಸ್ಯಾನಿಟೈಸರ್ ಮಾಡಿಕೊಳ್ಳುವುದನ್ನು ಗಮನಿಸುವ ಕಾರ್ಯ ಮಾಡಲಿದ್ದಾರೆ.
ನಾಳೆ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ಆಯೋಗ ಹಳೆವ್ಯವಸ್ಥೆಗೆ ಶರಣಾಗಿದ್ದು, ಬ್ಯಾಲೆಟ್ ಪೇಪರ್ ಗಳನ್ನೇ ಬಳಸಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತಯಂತ್ರವನ್ನು ಚುನಾವಣಾ ಆಯೋಗ ಬಳಸುತ್ತಿದೆ.
ಕೊರೊನಾ ಸೋಂಕಿತರಿಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಕೊನೆಯ ಒಂದು ಗಂಟೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ನಾಳೆ ಮತದಾನ ಬೆಳಿಗ್ಗೆ 7 ರಿಂದ ಸಂಜೆ 5ರವರೆಗೂ ನಡೆಯಲಿದ್ದು, ಸಾವಿರ ಮತದಾರರಿಗೆ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಮತದಾರರು ದೈಹಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ.

ಬಿಗಿಭದ್ರತೆ
ನಾಳಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದು,ಪ್ರತಿಮತಗಟ್ಟೆಗೂ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಗ್ರಾಮ ಪಂಚಾಯಿತಿಗಳ 2ನೇ ಹಂತದ ಚುನಾವಣೆ ಡಿ 27 ರಂದು ನಡೆಯಲಿದ್ದು, ಮತ ಎಣಿಕೆ ಡಿ. 30 ರಂದು ನಡೆಯಲಿದೆ.