
ಕಲಬುರಗಿ,ಆ.7:ಕಾಂಗ್ರೆಸ್ಸಿಗರು ಬಿಜೆಪಿಯವರಿಗೆ ಚಾಕು ಹಾಕಿದರೆ, ಬಿಜೆಪಿಯವರು ಖಡ್ಗದೊಂದಿಗೆ ಅವರ ಮನೆ ಹೊಕ್ಕು ಹೊಡೆಯುತ್ತೇವೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರು ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಬಿಜೆಪಿ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಾವಳಗಿ ಗ್ರಾಮ ಪಂಚಾಯಿತಿ ಸದಸ್ಯೆಗೆ ಕಾಂಗ್ರೆಸ್ಸಿಗರು ಚಾಕು ಹಚ್ಚಿ ಹಲ್ಲೆ ಮಾಡಿದ್ದಾರೆ. ಇದು ಖಂಡನಾರ್ಹ. ಕೂಡಲೇ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ನೋಡಿಕೊಳ್ಳಬೇಕು. ನಾವು ಸಂವಿಧಾನದ ಅಡಿಯಲ್ಲಿ ಮತ್ತು ಕಾನೂನಿನ ಅಡಿಯಲ್ಲಿಯೂ ಕಾರ್ಯನಿರ್ವಹಿಸುತ್ತೇವೆ. ಆ ಮೂಲಕ ಕಾಂಗ್ರೆಸ್ಸಿಗರು ಕಾರ್ಯನಿರ್ವಹಿಸಬೇಕು. ಅದೂ ಆಗದೇ ಅವರು ಚಾಕು ಹಿಡಿದುಕೊಂಡು ಬಂದು ಬಿಜೆಪಿಯವರ ಮೇಲೆ ಹಲ್ಲೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ನಾವು ಖಡ್ಗಗಳನ್ನು ಹಿಡಿದುಕೊಂಡು ಮನೆಗೆ ನುಗ್ಗುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಭಾಗೀರಥಿ ಗುನ್ನಾಪುರ ಮತ್ತು ನಗರ ಘಟಕದ ಅಧ್ಯಕ್ಷೆ ಶ್ರೀಮತಿ ಶೋಭಾ ಬಾಗೇವಾಡಿ ಅವರು ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಸಾವಳಗಿ (ಬಿ) ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ನಾಗಮ್ಮ ಗಂಡ ತುಕ್ಕಪ್ಪ ಕೊಂಡೇದ್ ಅವರು ಹೊಲದಲ್ಲಿ ಕೆಲಸ ಮಾಡುವಾಗ ಅಪರಿಚಿತ ವ್ಯಕ್ತಿಗಳು ಪೋಲಿಸರೆಂದು ಹೇಳಿಕೊಂಡು ಬಂದು ಚಾಕು ಹಚ್ಚಿದ್ದಾರೆ. ಅಲ್ಲದೇ ಅವರ ಪುತ್ರ ಮಲ್ಲಿಕಾರ್ಜುನ್ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಠಾಣಾಧಿಕಾರಿ ಮಾಮೂಲು ಪ್ರಕರಣ ದಾಖಲಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಮಧ್ಯಸ್ಥಿಕೆ ವಹಿಸಿ ಅಪಹರಣ, ಹಲ್ಲೆ, ಕೊಲೆ ಯತ್ನ ಮುಂತಾದವುಗಳಿಗೆ ಸಂಬಂಧಪಟ್ಟ ಐಪಿಸಿ ಸೆಕ್ಷನ್‍ಗಳನ್ನು ಸೇರಿಸಿ ಮಹಿಳಾ ಸದಸ್ಯೆಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ಸೂಕ್ತ ತನಿಖೆಗೆ ಒಳಪಡಿಸಿ ಆರೋಪಿಗಳ ವಿರುದ್ಧ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಶಾಸಕರಾದ ಶಶೀಲ್ ಜಿ. ನಮೋಶಿ, ಡಾ. ಅವಿನಾಶ್ ಜಾಧವ್, ಬಿ.ಜಿ. ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ್ ಪಾಟೀಲ್ ರೇವುರ್, ಶ್ರೀಮತಿ ಶೋಭಾ ಬಾಣಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಅಶೋಕ್ ಬಗಲಿ, ಶ್ರೀಮತಿ ಶಶಿಕಲಾ ಟೆಂಗಳಿ, ಮಣಿಕಂಠ್ ರಾಠೋಡ್, ಚಂದು ಪಾಟೀಲ್, ಮಹಾದೇವ್ ಬೆಳಮಗಿ, ಶಂಭುಲಿಂಗ್ ಬಳಬಟ್ಟಿ, ಉಮೇಶ್ ಪಾಟೀಲ್, ರಿತೇಶ್ ಗುತ್ತೇದಾರ್, ಶರಣು ಸಜ್ಜನ್, ಸಂತೊಷ್ ಹಾದಿಮನಿ, ಶ್ರೀಮತಿ ಚಂದಮ್ಮ ಪಾಟೀಲ್, ಶ್ರೀಮತಿ ಗೌರಿ ಚಿತಕೋಟಿ, ಸುಜಾನಿ ಪೋತದಾರ್, ಬಾಬುರಾವ್ ಹಾಗರಗುಂಡಗಿ ಮುಂತಾದವರು ಪಾಲ್ಗೊಂಡಿದ್ದರು.