ಗ್ರಾಮ ಪಂಚಾಯಿತಿ ಚುನಾವಣೆ ಹಳ್ಳಿಗಳಲ್ಲೂ ಅರಳಿದ ಕಮಲ


ಬೆಂಗಳೂರು.ಡಿ.೩೧- ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಮುಗಿಯುತ್ತಿದಂತೆ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲು ಸೋಲು-ಗೆಲುವಿನ ಲೆಕ್ಕಾಚ್ಚಾರ ನಡೆದಿದೆ. ಚುನಾವಣೆಯಲ್ಲಿ ಜಯಗಳಿಸಿರುವ ಅಭ್ಯರ್ಥಿಗಳು ’ನಮ್ಮವರೇ’ ಎಂದು ೩ ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತ ಸಂಖ್ಯಾ ಶಾಸ್ತ್ರದಲ್ಲಿ ಮುಳುಗಿದೆ.
ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಳ್ಳಿಯಲ್ಲು ಬೇರು ಬಿಟ್ಟಿರುವುದಂತೂ ನಿಜ. ನಗರ-ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತ ಎಂಬ ಅಪವಾದದಿಂದ ಹೊರ ಬಂದಿರುವ ಬಿಜೆಪಿ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹೆಚ್ಚು ಅಭ್ಯರ್ಥಿಗಳು ಜಯಗಳಿಸಿರುವುದಂತೂ ಖಚಿತ.
ಪಂಚಾಯ್ತಿ ಚುನಾವಣೆಯನ್ನು ೩ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಚುನಾವಣೆಗೆ ಮುನ್ನವೇ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರವಹಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ತನು, ಮನ ಅರ್ಪಿಸಿ ಜಯಗಳಿಸಲು ಅಗತ್ಯ ಭೂಮಿಕೆ ಸಿದ್ಧಪಡಿಸಲಾಗಿತ್ತು.
ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ರಣತಂತ್ರಗಳನ್ನು ರೂಪಿಸಿದ್ದ ರಾಜಕೀಯ ಪಕ್ಷಗಳು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರೆಮರೆಯಲ್ಲಿ ನಿಂತು ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಂಡಿದ್ದಾರೆ.
ಆಯಾ ಕ್ಷೇತ್ರಗಳ ಶಾಸಕರು, ಸಚಿವರುಗಳೂ ಸಹ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳೇ ಗೆಲ್ಲುವಂತೆ ತಂತ್ರ ರೂಪಿಸಿದ್ದು ಅದರಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದಂತೂ ದಿಟ.
ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಬಲಗೊಳಿಸಲು ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ, ಚುನಾವಣೆಗೂ ಮುನ್ನ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಡೆಸುವ ಮೂಲಕ ಗ್ರಾಮ ಪಂಚಾಯ್ತಿ ಚುನಾವಣೆಗೆ ವೇದಿಕೆ ರೂಪಿಸಿತ್ತು. ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಗ್ರಾಮಸ್ವರಾಜ್ಯ ಸಮಾವೇಶ ಸಾರ್ಥಕ ಎನಿಸಿದೆ.
ಕಾಂಗ್ರೆಸ್ ಮತ್ತ ಜೆಡಿಎಸ್ ಸಹ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರೂ ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಗುದ್ದಾಟ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗುವ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ.ನಾಯಕರುಗಳಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಸಂದೇಶ ಜನತೆಗೆ ತಲುಪಿತ್ತು. ಗುಂಪುಗಾರಿಕೆಯಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ವಿಫಲವಾಗಿ ಹಿನ್ನಡೆ ಅನುಭವಿಸಿದೆ.
ಆಡಳಿತಾರೂಢ ಬಿಜೆಪಿಗೆ ಪಾಠ ಕಲಿಸಲು ಇದ್ದ ಅವಕಾಶವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದುಕೊಂಡಿದ್ದು, ಗ್ರಾಮೀಣ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರ್ಕಾರಕ್ಕೆ ಮತ್ತೊಮ್ಮೆ ಗಟ್ಟಿ ಬೆಂಬಲದ ಸಂದೇಶ ರವಾನಿಸಿದ್ದಾರೆ.
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತನಗಿದ್ದ ಸೀಮಿತ ಅವಕಾಶದಲ್ಲೇ ಕೆಲವು ಕಡೆ ಗೆಲುವು ಸಾಧಿಸುವ ಮೂಲಕ ಪಕ್ಷದ ಅಸ್ಥಿತ್ವ ಬೇರು ಮಟ್ಟದಲ್ಲಿ ಇನ್ನು ಇದೆ ಎಂಬುದನ್ನು ತೋರಿಸಿದೆ.ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದರೂ
ಆಡಳಿತಾರೂಢ ಬಿಜೆಪಿಯೇ ಈ ಚುನಾವಣೆಯಲ್ಲಿ ಗೆದ್ದು ಬೀಗುವ ಮೂಲಕ ಮುಂದಿನ ವಿಧಾನಸಭಾ ಚುನಾಣೆಯಲ್ಲೂ ಪಕ್ಷದ್ದೇ ಗೆಲುವು ಎಂಬ ಹುಮ್ಮಸ್ಸಿನಲ್ಲಿರುವುದಂತೂ ನಿಜ.
ಗ್ರಾಮ ಪಂಚಾಯ್ತಿ ಚುನಾವಣೆಗಳು ಪಕ್ಷರಹಿತವಾಗಿ ನಡೆದಿದ್ದರೂ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ರಾಜ್ಯ ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ.
ರಾಜ್ಯದ ೫,೭೨೮ ಗ್ರಾಮ ಪಂಚಾಯ್ತಿಗಳ ೮೨.೬೧೬ ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆದಿದ್ದ ಚುನಾವಣೆಯ ಮತ ಎಣಿಕೆ ನಿನ್ನೆ ನಡೆದು ಫಲಿತಾಂಶ ಬಹುತೇಕ ಹೊರ ಬಿದ್ದಿದೆ. ಅಭ್ಯರ್ಥಿಗಳ ಗೆಲುವಿನ ಆಧಾರದ ಮೇಲೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳು ಗೆದ್ದಿರುವ ಬಗ್ಗೆ ಅಂಕಿ-ಅಂಶಗಳನ್ನು ನೀಡಿರುವುದು ಚುನಾವಣಾ ಆಯೋಗಕ್ಕೆ ಇರುಸು-ಮುರುಸು ತಂದಿದೆ.
ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷಾತೀತವಾಗಿ ನಡೆದಿದ್ದರೂ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಇಂತಿಷ್ಟು ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ.