ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕರ್ತರ ಶಕ್ತಿಯ ಪ್ರತೀಕ: ಎಂ.ಪಿ.ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ. ಡಿ.೨೩; ಗ್ರಾಮ ಪಂಚಾಯಿತಿ ಚುನಾವಣೆ ಎನ್ನುವುದು ಕಾರ್ಯಕರ್ತರ ಚುನಾವಣೆಯಾಗಿದೆ. ಈ ಚುನಾವಣೆಕಾರ್ಯಕರ್ತರ ಶಕ್ತಿಯ ಪ್ರತೀಕವಾಗಿದ್ದು, ಕಾರ್ಯಕರ್ತರಿಗೆ ಅಧಿಕಾರ ನೀಡುವ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಬಲವರ್ಧನೆಗೊಳಿಸಬೇಕಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ  ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಅಂಗವಾಗಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದ ಅವರು, ಎಲೆ ಮರೆ ಕಾಯಿಗಳಂತೆ ಹಗಲಿರುಳು ದುಡಿಯುವ ಕಾರ್ಯಕರ್ತರಿಗೆ ಜನರು ಬೆಂಬಲ ನೀಡಬೇಕು. ಹಣಬಲ, ತೋಳ್ಬಲದಿಂದ ಚುನಾವಣೆ ನಡೆಯದೇ ನಿಜವಾಗಿಯೂ ಜನರ ಕಷ್ಟಗಳಿಗೆ ಸ್ಪಂದಿಸುವಂತಹ ಅಭ್ಯರ್ಥಿಗಳಿಗೆ ಮತ ನೀಡಬೇಕು. ನೆರೆ, ಕೋವಿಡ್, ಬರದಂತಹ ಭೀಕರ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಪಕ್ಷದವರ ಭಾವನಾತ್ಮಕ ಮಾತುಗಳಿಗೆ ಮಾರು ಹೋಗದೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಮರಣಶಾಸನ ಬರೆಯಲಾಗಿದೆ. ಬಿಜೆಪಿ ಪಕ್ಷ ರೈತನ ಪರವಾಗಿ ಇರದೇ ದಳ್ಳಾಳಿಗಳ ಪರವಾಗಿದೆ. ಪ್ರತಿಯೊಂದು ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಹಿಗಳ ಕಪಿಮುಷ್ಠಿಗೆ ದೇಶವನ್ನು ನೀಡಲಾಗುತ್ತಿದೆ. ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಿರುವ ಬಿಜೆಪಿಯವರ ನಿಜ ಬಂಡವಾಳ ದೇಶದ ಅನ್ನದಾತನಿಗೆ ಗೊತ್ತಾಗಿದೆ. ಹೀಗಾಗಿಯೇ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ತಳಮಟ್ಟದಿಂದಲೇ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದರು.ಹರಪನಹಳ್ಳಿ ಕ್ಷೇತ್ರದ ಕೆ.ಕಲ್ಲಹಳ್ಳಿ, ಕುಂಚೂರು, ನಿಟ್ಟೂರು, ಹಲುವಾಗಲು, ರಾಗಿಮಸಲವಾಡ, ದುಗ್ಗಾವತ್ತಿ, ಕಡತಿ, ಹಿರೇಮೇಗಳಗೆರೆ, ಗುಂಡಗತ್ತಿ, ನೀಲಗುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಂಗ್ರೆಸ್ ಹುರಿಯಾಳುಗಳ ಪರ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು