ಗ್ರಾಮ ಪಂಚಾಯಿತಿ ಉಪ ಚುನಾವಣೆ: ಮಲ್ಲಾಬಾದ್‍ನಲ್ಲಿ ಭಾಗಪ್ಪ, ಗೊಬ್ಬುರ(ಬಿ)ಯಲ್ಲಿಸೊಸೆ ಊರ್ಮಿಳಾರಿಗೆ ಗೆಲುವು

ಅಫಜಲಪುರ :ಮಾ.1: ತಾಲ್ಲೂಕಿನ ಮಲ್ಲಾಬಾದ್ ಹಾಗೂ ಗೊಬ್ಬೂರ್(ಬಿ) ಗ್ರಾಮ ಪಂಚಾಯಿತಿ ಉಪ ಚುನಾವಣೆ ಮತ ಎಣಿಕೆಯು ಮಂಗಳವಾರ ಜರುಗಿದ್ದು, ಮಲ್ಲಾಬಾದ್‍ನಲ್ಲಿ ಭಾಗಪ್ಪ ಪ್ರಭು ಕೊಳ್ಳಿ 211 ಮತಗಳಿಂದ ಹಾಗೂ ಗೊಬ್ಬೂರ್ (ಬಿ)ಯಲ್ಲಿ ಅತ್ತೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೊಸೆ ಊರ್ಮಿಳಾ ಪ್ರಭುಲಿಂಗ್ ದೇವತಕಲ್ ಅವರು 535 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಮಲ್ಲಾಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 06- ಚಿಂಚೋಳಿ ಗ್ರಾಮದ ಗೊಬ್ಬೂರ್(ಬಿ) ಗ್ರಾಮ ಪಂಚಾಯಿತಿಯ ಒಂದು ಸದಸ್ಯ ತೆರವಾದ ಸ್ಥಾನಕ್ಕೆ ಫೆಬ್ರವರಿ 25ರಂದು ಮತದಾನ ಆಗಿತ್ತು. ಹೀಗಾಗಿ ಬೆಳಿಗ್ಗೆ ತಹಸಿಲ್ ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನೆರವೇರಿತು.
ಅನೀತಾ ಶಿವಪ್ಪ ದೊಡ್ಡಮನಿ ಅವರು ಸರ್ಕಾರಿ ನೌಕರಿ ಸಿಕ್ಕ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ರೀತಿ ಗೊಬ್ಬೂರ್(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ಕಾಶಿನಾಥ್ ದೇವತ್ಕಲ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಜರುಗಿತು.
ಮಲ್ಲಾಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 06ರ ಚಿಂಚೋಳಿಯಲ್ಲಿ ಒಟ್ಟು 498ಮತದಾನವಾಗಿತ್ತು. ಖಾಲಿಯಾದ ಸಾಮಾನ್ಯ ಸ್ಥಾನಕ್ಕೆ ಭಾಗಪ್ಪ ಪ್ರಭು ಕೊಳ್ಳಿ ಅತೀ ಹೆಚ್ಚು 211 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ವಂದನಾ ಯಲ್ಲಾಲಿಂಗ್ ಬಸರಿಗಿಡ ಅವರು 204, ಸುರೇಶ್ ಸಿದ್ದಣ್ಣ ಜಗದಿ 53 ಹಾಗೂ ಸೂರ್ಯಕಾಂತ್ ಸಿದ್ರಾಮಪ್ಪ ಮಾಶಾಳಕರ್ ಅವರು ಕೇವಲ 20 ಮತಗಳನ್ನು ಪಡೆದು ಪರಾಭವಗೊಂಡರು. ಹತ್ತು ಮತಗಳು ತಿರಸ್ಕøತಗೊಂಡಿವೆ.
ಅದೇ ರೀತಿ ಗೊಬ್ಬೂರ್(ಬಿ) ಗ್ರಾಮ ಪಂಚಾಯಿತಿಯ ಒಂದು ಗೊಬ್ಬೂರ್(ಬಿ)ಯಲ್ಲಿ ಒಟ್ಟು 840 ಮತಗಳು ಚಲಾವಣೆಗೊಂಡಿದ್ದವು. ಅತ್ತೆಯಿಂದ ತೆರವಾದ ಸ್ಥಾನಕ್ಕೆ ಸೊಸೆ ಊರ್ಮಿಳಾ ಪ್ರಭುಲಿಂಗ್ ದೇವತ್ಕಲ್ ಅವರು ಸ್ಪರ್ಧಿಸಿ 535ಮತಗಳನ್ನು ಪಡೆದು ಆಯ್ಕೆಯಾದರು. ಅವರ ಸಮೀಪದ ಪ್ರತಿಸ್ಪರ್ಧಿ ಕವಿತಾ ಶಂಕ್ರಪ್ಪ ಧೂಪದ್ ಅವರು 295ಮತಗಳನ್ನು ಪಡೆದು ಪರಾಭವಗೊಂಡರು. ಹತ್ತು ಮತಗಳು ಅಸಿಂಧುವಾದವು. ಇಬ್ಬರ ಆಯ್ಕೆಯನ್ನು ಅಧಿಕೃತವಾಗಿ ಚುನಾವಣಾಧಿಕಾರಿಗಳು ಆದ ತಹಸಿಲ್ದಾರ್ ಸಂಜೀವಕುಮಾರ್ ದಾಸರ್ ಅವರು ಘೋಷಿಸಿದರು. ಈ ಸಂದರ್ಭದಲ್ಲಿ ಚುನಾವಣೆ ಸಹಾಯಕ ಅಧಿಕಾರಿ ಶಿರಸ್ತೆದಾರ್ ಮಂಜುನಾಥ್ ಜೋಗೂರ್, ಶಿವಶರಣಪ್ಪ ಸಾಲೂಟಗಿ, ಸಿಬ್ಬಂದಿಗಳಾದ ಬಸರೆಡ್ಡಿ, ಈರಣ್ಣ ಏಲಿಕೇರಿ, ಶಿವಾನಂದ್ ಅರಿಕೇರಿ, ಗಿರೀಶ್ ಜಮಖಂಡಿ, ಅತೀಕ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.