ಗ್ರಾಮ ಪಂಚಾಯಿತಿಯಲ್ಲಿ ಕೆಡಿಪಿ ಸಭೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ ಡಿ 24: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೋಸ್ಕರ, ಪಂಚಾಯಿತಿಗೆ ಒಳಪಡುವ ಸರ್ಕಾರಿ ಇಲಾಖೆಗಳ ಮಾಹಿತಿಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಡಿಪಿ ಸಭೆ ಆಯೋಜಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯರ್ ಗಿರೀಶ್ ತಿಳಿಸಿದರು. ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಪಂಚಾಯಿತಿಗೆ ಸಂಬಂಧಪಟ್ಟಂತೆ 20 ಸರ್ಕಾರಿ ಇಲಾಖೆಗಳಿದ್ದು, ಎಲ್ಲಾ ಅಧಿಕಾರಿಗಳು ಸಭೆಗೆ ಆಗಮಿಸದಿರುವುದು ಬೇಸರದ ವಿಚಾರವಾಗಿದೆ, ಸಂಬಂಧಪಟ್ಟ ಇಲಾಖೆ ವತಿಯಿಂದ ಜನಸಾಮಾನ್ಯರಿಗೆ ಸಿಗುವ ಸವಲತ್ತುಗಳು ಹಾಗೂ ಅದರ ಬಗ್ಗೆ ಮಾಹಿತಿ ನೀಡಲು ಸಭೆಗಳನ್ನು ಆಯೋಜಿಸಲಾಗುತ್ತದೆ ಆದರೆ ಕೆಲವು ಅಧಿಕಾರಿಗಳು ಸಭೆಗೆ ಗೈರಾಗಿ ಜನರಿಗೆ ನೀಡಬೇಕಾದ ಮಾಹಿತಿಗಳು ಅಪೂರ್ಣಗೊಳ್ಳುತ್ತವೆ, ಇದೇ ಮೊದಲ ಬಾರಿಗೆ ಬೆಟ್ಟದಪುರ ಗ್ರಾಮ ಪಂಚಾಯಿತಿಯಲ್ಲಿ ಕೆ ಡಿ ಪಿ ಸಭೆಯನ್ನು ಮಾಡಲಾಗುತ್ತಿದೆ ಮುಂದಿನ ದಿನದಲ್ಲಿ ಗೈರಾದ ಅಧಿಕಾರಿಗಳು ಸೂಕ್ತ ಕಾರಣ ನೀಡಬೇಕು, ಇಲ್ಲವಾದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಕೃಷಿ ಅಧಿಕಾರಿ ಪ್ರವೀಣ್ ಸಭೆಯಲ್ಲಿ ಮಾತನಾಡಿ ಕೃಷಿಕರಿಗೆ ಸಂಬಂಧಪಟ್ಟ ಬಿತ್ತನೆ ಬೀಜಗಳು, ಮತ್ತು ಸರ್ಕಾರದಿಂದ ಸಿಗುವ ಸೌಲತ್ತುಗಳ ಬಗ್ಗೆ, ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದರು. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮನೆ ಬಾಗಿಲಿನವರೆಗೂ ಅಧಿಕಾರಿಗಳು ತೆರಳಿ ರೈತರಿಗೆ ಮಾಹಿತಿ ನೀಡಲು ಕ್ರಮ ಕೈಗೊಂಡಿದ್ದೇವೆ ಎಂದರು.
ವೈದ್ಯಾಧಿಕಾರಿ ಪೂಜಾ ಮಾತನಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಒಬ್ಬರೇ ವೈದ್ಯಾಧಿಕಾರಿ ಇಬ್ಬರು ಸಿಬ್ಬಂದಿಗಳು ಮಾತ್ರ ಇದ್ದೇವೆ, 24 ಗಂಟೆ ಹೆರಿಗೆ ಸೌಲಭ್ಯ ವ್ಯವಸ್ಥೆ ಆಸ್ಪತ್ರೆಯಲ್ಲಿದ್ದು, ಯುಪಿಎಸ್ ಸಮಸ್ಯೆ ಇದೆ, ಕಿಟಕಿ ಹಾಗೂ ಬೆಡ್ ಗಳ ಸುತ್ತ ನೆಟ್ ವ್ಯವಸ್ಥೆ ಮಾಡಬೇಕಿದೆ, ರಾತ್ರಿ ಸಮಯದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲವಾದರೆ ನಮ್ಮ ಮೇಲೆ ಜಗಳ ಮಾಡುತ್ತಾರೆ, ಕೆಲವು ಸಮಯದಲ್ಲಿ ಪೆÇಲೀಸರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥ ಗೊಳಿಸಿರುವ ಸಾಕಷ್ಟು ಉದಾಹರಣೆಗಳಿವೆ, ಗ್ರಾಮ ಪಂಚಾಯಿತಿ ವತಿಯಿಂದ ಆಸ್ಪತ್ರೆಯ ಆಸುಪಾಸಿನಲ್ಲಿ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಮಾಡಿಸಬೇಕೆಂದು ಮನವಿ ಮಾಡಿದರು.

ಶಿಕ್ಷಣ ಇಲಾಖೆ ವತಿಯಿಂದ ಬಂದಂತ ಮುಖ್ಯ ಶಿಕ್ಷಕರು ಶಾಲೆಗಳಿಗೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಾಂಪೌಂಡ್ ನಿರ್ಮಾಣ, ಬಾಲಕಿಯರಿಗೆ ಹೈಟೆಕ್ ಶೌಚಾಲಯ, ಕೊಠಡಿಗಳ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.

ಪಿ ಡಿ ಒ ಎಚ್.ಡಿ ಮಂಜುನಾಥ್ ಮಾತನಾಡಿ ಗ್ರಾಮೀಣಾಭಿವೃದ್ಧಿಗೆ ಅಗತ್ಯವಿರುವ ಅನುದಾನಗಳು, ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಮಾಡುತ್ತೇವೆ, ಪಂಚಾಯಿತಿಗೆ ಒಳಪಡುವ ಶಾಲೆಗಳಿಗೆ ಈಗಾಗಲೇ ಭೇಟಿ ನೀಡಿದ್ದು, ಕೆಲವು ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲಾಗಿದೆ, ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀಣಾ ಸದಸ್ಯರಾದ ಸೌಮ್ಯ ರೇಖಾ ಲಕ್ಷ್ಮಿ ಮಂಜುಳಾ, ಇಬ್ರಾಹಿಂ, ಈಶ್ವರ ಚಾರ್, ಗಿರಿಗೌಡ, ರಜನಿಕಾಂತ್, ರಾಜಶೇಖರ್ ವಿವಿಧ ಇಲಾಖೆಯ ಅಧಿಕಾರಿಗಳಾದ ಕೌಶಿಕ್,ದರ್ಶನ್, ಶೈಲಜಾ, ಪುಷ್ಪಾವತಿ, ಕೃಷ್ಣೆಗೌಡ,ಮಲ್ಲೇಶ್, ಗುರುನಾಯಕ್ ಸೇರಿದಂತೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯರ್ ಗಿರೀಶ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಂಜುನಾಥ್, ವೀಣಾ, ಸೌಮ್ಯ, ಮಂಜುಳಾ, ಪಾಂಡು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.