ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಅಭಿವೃದ್ದಿ ಅಧಿಕಾರಿಗಳ ಕರೋನಾ ನಿಯಂತ್ರಣ ಸಭೆ

ಸಿರುಗುಪ್ಪ, ಮೇ.28: ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಅಭಿವೃದ್ದಿ ಅಧಿಕಾರಿಗಳ ಕರೋನಾ ನಿಯಂತ್ರಣ ಸಭೆಯು ನಡೆಯಿತು.
ಸಭೆಯನ್ನು ಉದ್ದೇಶಿಸಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ ದೇಶದಲ್ಲಿ ನಮ್ಮ ಬಳ್ಳಾರಿ ಜಿಲ್ಲೆಯು ಹೆಚ್ಚು ಪ್ರಕರಣಗಳನ್ನು ಹೊಂದಿದ 5ನೇ ಜಿಲ್ಲೆಯಾಗಿದೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಬೇದ ಮರೆತು ಎಲ್ಲಾರು ಒಗ್ಗಟ್ಟಿನಿಂದ ಸೇರಿ ಗ್ರಾಮಗಳಲ್ಲಿನ ಜನರ ತಪಾಸಣೆ, ಮತ್ತು ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿ, ಕರೋನದಿಂದ ತೊಂದರೆಗಳನ್ನು ಅನುಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವಂತೆ ಗಮನವಹಿಸಿ ಕರೋನಾ ನಿಯಮಗಳನ್ನು ಪಾಲಿಸಬೇಕು, ಗ್ರಾಮಗಳಲ್ಲಿ ಕರೋನಾ ಪಾಸಿಟಿವ್ ಬಂದ ನಂತರ ಆಸ್ಪತ್ರೆಗೆ ದಾಖಲಾದರೆ ಸಾವು ಸಂಭವಿಸುತ್ತದೆಂಬ, ವೈಧ್ಯರ ಕುರಿತು ಕೆಟ್ಟ ಅಭಿಪ್ರಾಯಗಳನ್ನು ಹಾಗೂ ಸುಳ್ಳುವದಂತಿಗಳನ್ನು ಹರಡಿಸುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು, ಕೋವಿಡ್ ಹಾರೈಕೆ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ, ಉತ್ತಮ ಊಟ, ಯೋಗಾಭ್ಯಾಸಗಳು, ಧ್ಯಾನ ಸೇರಿದಂತೆ ಇತರೆ ಚಟುವಟಿಕೆಗಳ ಮೂಲಕ ಆರೋಗ್ಯಕರ ವಾತವರಣವನ್ನು ಕಲ್ಪಿಸಲಾಗಿದೆ, ಮಾನವ ಸಂತತಿಯ ಅಳಿವು ಉಳಿವು ನಮ್ಮಲಿದೆ, ಪ್ರತಿಯೊಬ್ಬ ಜನಪ್ರತಿನಿಧಿಗಳು ಕರೋನಾ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿಸಲು ಶ್ರಮಿಸಿ ಹಾಗೂ ಕರೋನಾ ಮುಕ್ತ ತಾಲೂಕನ್ನಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಸ್ಥೆಯ ನಿಕಟ ಪೂರ್ವ ರಾಜ್ಯಾಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಮಾತನಾಡಿ ಸರ್ಕಾರವು ಜನರ ಆರೋಗ್ಯದ ದೃಷ್ಠಿಯಿಂದ ಕೋವಿಡ್ ತಪಾಸಣೆ, ಪೂರಕ ಚಿಕಿತ್ಸೆಗಾಗಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಕರೋನಾ ವಾರಿಯರ್ಸ್‍ಗಳಾದ ವೈಧ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕರೋನಾ ನಿಯಂತ್ರಣಕ್ಕಾಗಿ ಬದ್ದವಾಗಿ ಕೆಲಸ ನಿರ್ವಹಿಸುತ್ತಿವೆ, ಕಿಡಿಗೆಡಿಗಳು ಹಬ್ಬಿಸುವ ಸುಳ್ಳುವದಂತಿಗಳಿಂದ ಹಾಗೂ ನಕಲಿ ವೈಧ್ಯರಿಂದ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಇದ್ದರಿಂದ ಸಾರ್ವಜನಿಕರು ಎಚ್ಚರವಹಿಸಿಬೇಕು, ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ತಕ್ಷಣ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಭೇಟಿ ನೀಡಿ ವಿವಿಧ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಸಿಪಿಐ ಟಿ.ಆರ್.ಪವಾರ್ ಮಾತನಾಡಿ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಒಬ್ಬೊಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲು ಸಾಧ್ಯವಾಗುವುದಿಲ್ಲ, ಗ್ರಾಮೀಣ ಭಾಗದ ಜನಪ್ರತಿನಿಧಿಗಳು ಅಕ್ರಮ ಚಟುವಟಿಕೆಗಳ ಹಾಗೂ ಕರೋನಾ ನಿಯಮಗಳನ್ನು ಪಾಲಿಸದೆ ಇರುವರ ಮಾಹಿತಿ ನೀಡಿದಲ್ಲಿ ಅಂತವರ ವಿರುದ್ದ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು, ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಸ್ವಯಂ ಸೇವಕರಾಗಿ ಸಾರ್ವಜನಿಕರಿಗೆ ಕರೋನಾ ವಿರುದ್ದ ಜಾಗೃತಿ ಮೂಡಿಸಲು ಗ್ರಾಮಗಳಿಗೆ ಭೇಟಿನೀಡುವ ವೈಧ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಹಾಗೂ ಅಭಿವೃದ್ದಿ ಅಧಿಕಾರಿಗಳೊಂದಿಗೆ ಸಹಕಾರಿಸುವಂತೆ ತಿಳಿಸಿದರು.
ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿದ್ಯಾಶ್ರೀ ಮಾತನಾಡಿ ಕೋವಿಡ್-19 ಪ್ರಥಮ ಅಲೆಯಲ್ಲಿ ಕೋವಿಡ್ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿಯದಿದ್ದರೂ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೆವೆ, ಕರೋನಾ ವೈರಸ್ ಅಪಾಯಕಾರಿ ಬಗ್ಗೆ ಗೊತ್ತಿದ್ದರು ನಿರ್ಲಕ್ಷ್ಯದಿಂದ ಸಾವು ನೋವುಗಳನ್ನು ಅನುಭವಿಸುತ್ತಿರುವುದು ದೂರದೃಷ್ಟಕರವಾಗಿದೆ, ಗ್ರಾಮಗಳ ಪ್ರತಿನಿಧಿಗಳಾದ ನೀವು ಮತದಾನಕ್ಕೆ ಮನವೊಲಿಸುವಂತೆ ಎಲ್ಲಾ ಸಾರ್ವಜನಿಕರನ್ನು ಕೋವಿಡ್-19 ತಪಾಸಣೆಗಾಗಿ ಮನವೊಲಿಸಿ ಹೆಚ್ಚು ಹೆಚ್ಚು ತಪಾಸಣೆ ಮಾಡಲು ಅವಕಾಶ ನೀಡಿದಲ್ಲಿ ಕರೋನಾ ನಿಯಂತ್ರಣಕ್ಕೆ ಸಾಧ್ಯವಾಗುತ್ತದೆ, ಹೋಮ್ ಐಸುಲೇಶನ್‍ಗೂ ಮತ್ತು ಕೋವಿಡ್ ಆರೈಕೆ ಕೇಂದ್ರಕ್ಕೂ ವ್ಯತ್ಯಾಸವಿದ್ದು ಕೋವಿಡ್ ಆರೈಕೆ ಕೇಂದ್ರದಲ್ಲಿ ದಿನ ನಿತ್ಯವೂ ಸೋಂಕಿತರನ್ನು ತಾಪಸಣೆ ಮಾಡಿ ಸೂಕ್ತ ಔಷಧೊಪಾಚರ ಮಾಡಲಾಗುವುದು, ಈ ರೀತಿ ಮಾಡುವುದರಿಂದ ಎಲ್ಲಾ ಸೋಂಕಿತರ ಮನೆಗೆ ಅಲೆಯುವ ಸಮಯ ಉಳಿಯುವದರೊಂದಿಗೆ ಒಂದಡೆ ಇರುವ ಸೋಂಕಿತರ ಸಂರ್ಪಕ ಸರಪಳಿ ಕೊಂಡಿ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಸ್ಥೆಯ ತಾಲೂಕು ಅಧ್ಯಕ್ಷೆ ಡಾ.ಗಂಗಮ್ಮ ಮಾತನಾಡಿ ಪ್ರತಿಯೊಂದು ಹಳ್ಳಿಗಳಲ್ಲಿ ಸ್ಯಾನಿಟೆಜರ್ ಸಿಂಪರಣೆ ಮಾಡುವುದು, ಕಡ್ಡಾಯವಾಗಿ ಕರೋನಾ ನಿಯಮವಳಿಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸುವುದು, ಗ್ರಾಮೀಣ ಭಾಗದಲ್ಲಿ ಕಂಡು ಬರುವ ಸೋಂಕಿತರು ತಾವು ಇನ್ನೊಬ್ಬರಿಗೆ ಹರಡದಂತೆ ಆರೈಕೆ ಕೇಂದ್ರಗಳಿಗೆ ಸೇರುವುದರಿಂದ ನಿಮ್ಮ ಕುಟುಂಬದೊಂದಿಗೆ ಗ್ರಾಮವನ್ನು ಕರೋನದಿಂದ ರಕ್ಷಿಸಿದಂತಾಗುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಶಿವಪ್ಪ ಸುಬೇದರ್ ಮಾತನಾಡಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿರುವ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷ ಹಾಗೂ ಸದಸ್ಯರ ಸಹಕಾರದೊಂದಿಗೆ ಗ್ರಾಮವನ್ನು ಸ್ವಚ್ಚಗೊಳಿಸಿ, ಕರೋನಾ ವಾರಿಯರ್ಸ್‍ಗಳಿಗೆ ಸಹಕರಿಸಿ ಕರೋನಾ ಮುಕ್ತ ಗ್ರಾಮಗಳನ್ನಾಗಿಸುವಂತೆ ತಿಳಿಸಿದರು.
ಇದೆ ಸಂದಭದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಅಭಿವೃದ್ದಿ ಅಧಿಕಾರಿಗಳು ಇದ್ದರು.