ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿಗಟ್ಟಿ ಓದು ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚನೆ

ಕಲಬುರಗಿ.ಜು.19:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಜೀಮ್ ಪ್ರೇಮ್‍ಜೀ ಫೌಂಡೇಶನ್ ಸಹಯೋಗದೊಂದಿಗೆ ಸೋಮವಾರ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಗಟ್ಟಿ ಓದು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಗ್ರಂಥಾಲಯವನ್ನು ನಿರ್ವಹಿಸುವ ಶಾಲಾ ಶಿಕ್ಷಕರಿಗೆ ಕಲಬುರಗಿ ತಾಲೂಕು ಪಂಚಾಯತ ಕಾರ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರವನ್ನು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅವರು ಉದ್ಘಾಟಿಸಿದರು.

 ನಂತರ ಅವರು ಮಾತನಾಡಿ, ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಗಟ್ಟಿ ಓದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು    ಒಂದು ದಿನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಗ್ರಂಥಾಲಯಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ ಗ್ರಂಥಾಲಯಗಳ ಮೇಲ್ವಿಚಾರಕರು ಬದ್ಧರಾಗಬೇಕು. ಮಕ್ಕಳು ಗ್ರಂಥಾಲಯಗಳನ್ನು ಉಪಯೋಗಿಸುವಂತೆ ಪ್ರೇರೇಪಿಸುವುದು ಹಾಗೂ ಸಮುದಾಯದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವುದು ಈ ಗಟ್ಟಿ ಓದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಜೀಮ್ ಪ್ರೇಮ್‍ಜೀ ಫೌಂಡೇಶನ್ ಸಂಯೋಜಕ ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಂಥಾಲಯಗಳು ಶಾಲೆಯಲ್ಲಿನ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಗ್ರಂಥಾಲಯಗಳು ಸಾಮಾಜಿಕ ಸಂಸ್ಥೆಯಾಗಿ ಮಾರ್ಪಾಡಾಗುವ ಮುಖಾಂತರ ಸಾಮಾಜಿಕ ಬದಲಾವಣೆಗೆ ಪೂರಕವಾಗಬೇಕು. ಗಟ್ಟಿ ಓದು ಕಾರ್ಯಕ್ರಮದ ಉದ್ದೇಶ ವಿವರಿಸಿದರು.

ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮೊನಪ್ಪ ಕಟ್ಟಿಮನಿ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಲು ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಅಜಯಕುಮಾರ ಉಪಸ್ಥಿತರಿದ್ದರು.

ಅಜೀಮ್ ಪ್ರೇಮ್‍ಜೀ ಫೌಂಡೇಶನ್‍ನ ಜಗನ್ನಾಥ ಉಪಾಪತಿ ಡೇಂಗಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.