ಗ್ರಾಮ ಪಂಚಾಯತ್:ಮೀಸಲಾತಿ ಪ್ರಕಟ

ಬೆಂಗಳೂರು, ಜ.2- ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶದ ಬೆನ್ನಲ್ಲೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ವರ್ಗವಾರು ಮೀಸಲಾತಿಯನ್ನು ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಅನುಗುಣವಾಗಿ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಬೇಕು.

ಈ ಹಿಂದೆ ಇದ್ದ 5 ವರ್ಷದ ಅಧಿಕಾರಾವಧಿಗೆ ಬದಲು ಇದೇ ಮೊದಲ ಬಾರಿಗೆ 30 ತಿಂಗಳ (ಎರಡೂವರೆ ವರ್ಷ) ಮೊದಲನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ರಾಜ್ಯದ 5,956 ಗ್ರಾ.ಪಂ.ಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ಆಯಾ ಪಂಚಾಯತ್ ಚುನಾಯಿತ ಸದಸ್ಯರಿಂದ ಸಮಾನ ಮತ ಪಡೆದ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ರಾಜ್ಯ ಒಟ್ಟು ಜನಸಂಖ್ಯೆಯಲ್ಲಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆ ಯಾವ ಅನುಪಾತದಲ್ಲಿಯೂ ಅಂತಹ ಹುದ್ದೆಗಳ ಸಂಖ್ಯೆ ರಾಜ್ಯದಲ್ಲಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಸರಿ ಸುಮಾರು ಅದೇ ಅನುಪಾತದಲ್ಲಿರತಕ್ಕದ್ದು ಎಂದು ಸೂಚಿಸಲಾಗಿದೆ.

1/3ರ ಸಂಖ್ಯೆಯಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡತಕ್ಕದ್ದು, ಹೀಗೆ ನಿಗದಿಪಡಿಸುವ ವೇಳೆ ಎಸ್ಸಿ-ಎಸ್ಟಿ ಮತ್ತು ಒಬಿಸಿಗೆ ಮೀಸಲಾದ ಒಟ್ಟು ಹುದ್ದೆಗಳು ರಾಜ್ಯದ ಗ್ರಾ.ಪಂ. ಒಟ್ಟು ಹುದ್ದೆಗಳ ಸಂಖ್ಯೆ ಶೇ.50ಕ್ಕೆ ಮೀರತಕ್ಕದಲ್ಲ. ಅಲ್ಲದೆ, ಮಹಿಳಾ ಮೀಸಲು ಹುದ್ದೆಗಳು ಶೇ.50ಕ್ಕಿಂತ ಹೆಚ್ಚಿದ್ದರೆ ಸಾಮಾನ್ಯ ವರ್ಗದ ಮಹಿಳೆಗೆ ನಿಗದಿಪಡಿಸಬೇಕು ಎಂದು ಹೇಳಲಾಗಿದೆ.

ಅಷ್ಟೇ ಅಲ್ಲದೆ, ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ವೇಳೆ ಹುದ್ದೆಗಳ ಸಂಖ್ಯೆ ಕಡಿಮೆ ಇದ್ದು, ಸದಸ್ಯರ ಸಂಖ್ಯೆ ಸಮವಾಗಿದ್ದರೆ ಅಂತಹ ಪಂಚಾಯಿತಿಗಳ ಸದಸ್ಯರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳನ್ನು ಆಯ್ಕೆ ಮಾಡುವಾಗ ಗ್ರಾಮ ಪಂಚಾಯಿತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ(ಬ), ಸಾಮಾನ್ಯ(ಮಹಿಳೆ) ಸಾಮಾನ್ಯ ಕ್ರಮದಲ್ಲಿ ನಿಗದಿಪಡಿಸತಕ್ಕದ್ದು, ಒಂದೇ ಗ್ರಾಮ ಪಂಚಾಯಿತಿಯಲ್ಲಿ ಏಕ ಕಾಲದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳನ್ನು ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳಿಗೆ ನಿಗದಿಪಡಿಸುವಂತಿಲ್ಲ. ಅಂತೆಯೇ ಹಿಂದುಳಿದ ವರ್ಗ(ಅ)ಮತ್ತು ಹಿಂದುಳಿದ ವರ್ಗ(ಅ) ಹಿಂದುಳಿದ ವರ್ಗ(ಬ) ಮತ್ತು ಹಿಂದುಳಿದ ವರ್ಗ(ಬ)ಗಳಿಗೆ ಏಕಕಾಲದಲ್ಲಿ ನೀಡಲು ಸಾಧ್ಯವಿಲ್ಲ.

ತಾಲೂಕುವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ನಿಗದಿಪಡಿಸುವಾಗ ಮೊದಲು ಎಲ್ಲಾ ಅಧ್ಯಕ್ಷರ ಸ್ಥಾನಗಳ ಮೀಸಲಾತಿಯನ್ನು ನಿಗದಿಪಡಿಸಿ ಬಳಿಕ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಿದರೆ ಸ್ಥಾನ ಹಂಚಿಕೆ, ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದನ್ನು ತಡೆಯಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಗೆಲುವು:ರಾಜ್ಯದ 5,728 ಗ್ರಾ.ಪಂ.ಗಳ ಒಟ್ಟು 91,339 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 32,829, ಬಿಜೆಪಿ ಬೆಂಬಲಿತ-30,853, ಜೆಡಿಎಸ್ ಬೆಂಬಲಿತ-16,841 ಹಾಗೂ ಪಕ್ಷೇತರರು- 10,816 ಮಂದಿ ಆಯ್ಕೆಯಾಗಿದ್ದಾರೆಂದು ಹೇಳಲಾಗಿದೆ. 8,074 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.