ಗ್ರಾಮ ಪಂಚಾಯತಿ ಸದಸ್ಯರಿಗೆ ತರಬೇತಿ – ಸಚಿವ ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ, ಡಿ. 31: ‘ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ರಾಜ್ಯದ 92131 ಸದಸ್ಯರಿಗೆ ಗ್ರಾಪಂ ಆಡಳಿತದ ಕುರಿತು ತರಬೇತಿ ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದರು.ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 5762 ಗ್ರಾಮ ಪಂಚಾಯಿತಿಯಿಂದ 92131 ಸದಸ್ಯರು ಆಯ್ಕೆ ಆಗಿದ್ದಾರೆ. ಇವರಿಗೆ ತರಭೇತಿ ನೀಡಲು ಇಲಾಖೆ ನಿರ್ಧರಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯವತಿಯಿಂದ ಜ.19 ರಿಂದ ಮಾರ್ಚ್ 26 ರವರೆಗೆ 285 ತರಬೇತಿ ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ ಎಂದರು.900 ಜನ ಸಂಪನ್ಮೂಲ ವ್ಯಕ್ತಿಗಳ ನಿಯೋಜನೆ ಮಾಡಲಾಗಿದೆ. ಒಂದು ಬ್ಯಾಚ್ ನಲ್ಲಿ 50 ಜನ ಇರುತ್ತಾರೆ. ಇಂತಹ 10 ಬ್ಯಾಚ್ ಗಳನ್ನ ರಚಿಸಿ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಐದು ದಿನದ ತರಬೇತಿ ಇರುತ್ತದೆ. ಹೊಣೆಗಾರಿಕೆ, ಗ್ರಾಮ ಸಭೆ, ನಿರ್ವಾಹಣೆ, ಹಣಕಾಸು ಲಭ್ಯತೆ ಬಗ್ಗೆ ಮಾಹಿತಿ ಮತ್ತು ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು. ಪಂಚಾಯತ್ ರಾಜ್ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ತರಬೇತಿ ನೀಡಲಾಗುತ್ತಿದ್ದು 27.16 ಕೋಟಿ ಹಣ ವಿನಿಯೋಗಿಸಲಾಗುತ್ತಿದೆ. ಸದಸ್ಯರು ತರಬೇತಿಯಲ್ಲಿ ಭಾಗಿಯಾಗಬೇಕು. ಇದರಿಂದ ಹಳ್ಳಿ ಅಭಿವೃದ್ಧಿಗೆ ಶ್ರಮವಹಿಸಲು ಉಪಯುಕ್ತವಾಗಲಿದೆ.  ಪ್ರಯಾಣದ, ಊಟದ ಭತ್ಯೆಗಳಿರುತ್ತವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಂತರ ಇವರಿಗೂ ಪಿಡಿಒ ಜೊತೆ ಮತ್ತೆ ತರಬೇತಿಗಳಿರುತ್ತವೆ ಎಂದರು.