ಗ್ರಾಮ ಪಂಚಾಯತಿ ಸದಸ್ಯರಿಗೆ ಹಕ್ಕು ಕೊಡಿಸಿದ ನಾಯಕ ಕೆ.ಸಿ.ಕೊಂಡಯ್ಯ


ಹರಪನಹಳ್ಳಿ.ನ.೨೯; ಗ್ರಾಮ ಪಂಚಾಯತಿ ಸದಸ್ಯರ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರ ಪರವಾಗಿ ಸದನದ ಒಳಗೆ ಮತ್ತು ಹೊರಗೆ ನಿರಂತರವಾಗಿ ಹೋರಾಟ ಮಾಡುತ್ತಿರುವ ಅಧಿಕಾರ ವಿಕೇಂದ್ರೀಕರಣಕ್ಕೆ ನಿಜವಾದ ಅರ್ಥದಲ್ಲಿ ಶಕ್ತಿಯನ್ನು ತುಂಬುತ್ತಿರುವ ನಾಯಕ ಕೆ.ಸಿ.ಕೊಂಡಯ್ಯ ಅವರಿಗೆ ಮತ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮನವಿ ಮಾಡಿದರು.ತಾಲೂಕಿನ ಐಗಳ ಬಸಾಪುರದಲ್ಲಿ ಶುಕ್ರವಾರ ಬಳ್ಳಾರಿ ಕ್ಷೇತ್ರದ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರಲ್ಲಿ ಮತಯಾಚಿಸಿ ಮಾತನಾಡಿದ ಅವರು, ತಾಂತ್ರಿಕ ಕಾರಣದಿಂದ ಗ್ರಾಮ ಪಂಚಾಯತ್ ಸದಸ್ಯರ ಮತದಾನದ ಹಕ್ಕು ಬಿಟ್ಟು ಹೋಗಿದ್ದಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ ಅಂದಿನ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೇಲೆ ಒತ್ತಡ ತಂದು ಮತದಾನದ ಹಕ್ಕನ್ನು ಕೊಡಿಸಿದ್ದು ಕೆ.ಸಿ.ಕೊಂಡಯ್ಯ. ಅಂಥಹ ನಾಯಕನಿಗೆ ಮತ ನೀಡುವ ಮೂಲಕ ಮಹಾತ್ಮ ಗಾಂಧೀಜಿಯವರು ಕಂಡ ಕನಸಿನ ಭಾರತಕ್ಕೆ ಶಕ್ತಿ ತುಂಬಬೇಕು ಎಂದರು.ಬೀದಿ ದೀಪದಿಂದ ಹಿಡಿದು ಲೋಕೋಪಯೋಗಿ ಕೆಲಸದವರಗೆ, ಸರ್ಕಾರಿ ಕಟ್ಟಡಗಳಿಂದ ಹಿಡಿದು ಬಡವರಿಗೆ ಮನೆ ನಿರ್ಮಾಣ ಮಾಡುವವರೆಗೆ ನಿಜವಾದ ಅಧಿಕಾರ ಗ್ರಾಮ ಪಂಚಾಯಿತಿಗಳಲ್ಲಿ ಇರಬೇಕು. ಆ ಕನಸನ್ನು ಕಂಡಿದ್ದAತ ಅಬ್ದುಲ್ ನಜೀರ್ ಸಾಹೇಬ್, ಎಂ.ಪಿ.ಪ್ರಕಾಶ್ ಮತ್ತು ಎಂ.ವೈ.ಘೋರ್ಪಡೆ ಅವರ ಕನಸು ಸಾಕಾರಗೊಳ್ಳಬೇಕಾಗಿದ್ದರೆ ಮತ್ತೊಮ್ಮೆ ಕೊಂಡಯ್ಯರವರಿಗೆ ಮತವನ್ನು ನೀಡಬೇಕು. ವಿಧಾನಪರಿಷತ್ ಚುನಾವಣೆಯಲ್ಲಿ ತಾವು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವ ಮೂಲಕ, ಅಧಿಕಾರ ಕೇಂದ್ರೀಕರಣಕ್ಕೆ ಪ್ರಯತ್ನ ಮಾಡುತ್ತಿರುವ ಶಕ್ತಿಗಳಿಗೆ ಪಾಠ ಕಲಿಸಿ ಎಂದು ಕರೆ ನೀಡಿದರು.
ತಾಲೂಕಿನ ನಿಚ್ಚವ್ವನಹಳ್ಳಿ, ಕಡಬಗೆರೆ, ಮತ್ತಿಹಳ್ಳಿ, ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸದಸ್ಯರಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.