‘ಗ್ರಾಮ ಒನ್ ಸ್ಥಳೀಯ ಮಟ್ಟದಲ್ಲಿ ಸರ್ಕಾರದ ವ್ಯವಸ್ಥೆ

ಪುತ್ತೂರು: ಕಂದಾಯ ಇಲಾಖೆಯನ್ನೇ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಇದರ ಭಾಗವಾಗಿ ಜಿಲ್ಲಾಧಿಕಾರಿಗಳೇ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಗ್ರಾಮ ಒನ್ ಮೂಲಕ ಗ್ರಾಮ ಮಟ್ಟದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಮಾಡಿಕೊಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ನಗರದ ಪುರಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಕ್ರಮ – ಸಕ್ರಮ ಯೋಜನೆಯಡಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಿ ಅವರು ಮಾತನಾಡಿದರು. ಈ ಸಾಗುವಳಿ ಚೀಟಿ ಪಡೆದವರು ಆ ಭೂಮಿ ಇರುವ ತನಕ ಅನುಭೋಗಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅಕ್ರಮ -ಸಕ್ರಮಕ್ಕೆ ಸಂಬಂಧಪಟ್ಟಂತೆ ಫಾರ್ಮ್ ನಂ.೫೭ ರಲ್ಲಿ ಅರ್ಜಿ ಸಲ್ಲಿಕೆಯ ಅವಕಾಶವನ್ನು ೨೦೨೩ರ ಮೇ ಕೊನೆಯ ತನಕ ವಿಸ್ತರಿಸಲಾಗಿದೆ. ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
೧೬೩ ಮಂದಿಗೆ ವಿತರಣೆ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು ೧೬೩ ಮಂದಿಗೆ ಅಕ್ರಮ -ಸಕ್ರಮ ಸಾಗುವಳಿ ಚೀಟಿಯನ್ನು ನಕ್ಷೆ ಸಮೇತ ವಿತರಿಸಲಾಯಿತು. ೭ ಮಂದಿಗೆ ೯೪ ಸಿ. ಹಾಗೂ ೯೪ಸಿಸಿ ಹಕ್ಕುಪತ್ರವನ್ನು ಶಾಸಕ ಸಂಜೀವ ಮಠಂದೂರು ವಿತರಿಸಿದರು.
ವೇದಿಕೆಯಲ್ಲಿ ಅಕ್ರಮ – ಸಕ್ರಮ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ತಹಶೀಲ್ದಾರ್ ನಿಸರ್ಗಪ್ರಿಯ, ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್
ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ದಯಾನಂದ್ ಡಿ.ಟಿ. ಸ್ವಾಗತಿಸಿ, ವಂದಿಸಿದರು.
ಕೃಷಿ ಹಾನಿಗೂ ಪರಿಹಾರ
ಇದೀಗ ನಿರೀಕ್ಷೆ ಮೀರಿ ಮಳೆ ಸುರಿಯುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಎನ್.ಡಿ.ಆರ್.ಎಫ್. ನಿಂದ ಪರಿಹಾರ ನೀಡಲು ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೃಷಿ ಹಾನಿಗೂ ಪರಿಹಾರ ನೀಡಲು ಬದ್ಧರಿದ್ದೇವೆ ಎಂದು ಹೇಳಿದ ಶಾಸಕರು, ೯೪ ಸಿ, ೯೪ ಸಿಸಿ ಯಲ್ಲಿ ೯ ಸೆಂಟ್ಸ್ ಹಾಗೂ ೧.೭೫ ಸೆಂಟ್ಸ್ ಜಾಗವನ್ನು ನೀಡಲಾಗುತ್ತಿದೆ. ೯೪ ಸಿಸಿ ಯಲ್ಲಿ ೨.೭೫ ಎಕ್ರೆ ಜಾಗ ನೀಡುವಂತೆ ಬೇಡಿಕೆ ಇದ್ದು, ಈ ಕುರಿತು ಕಂದಾಯ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.