ಗ್ರಾಮ ಒನ್ ಕೇಂದ್ರ ಉದ್ಘಾಟನೆ-ಗ್ರಾಮಗಳಲ್ಲಿ ಒಂದೇ ಸೂರಿನಡಿ ಪ್ರಮುಖ ನಾಗರಿಕ ಸೇವೆಗಳು ಲಭ್ಯಃ ಸಚಿವ ಎಸ್.ಸುರೇಶ್ ಕುಮಾರ್

ವಿಜಯಪುರ, ಏ.8-ರಾಜ್ಯದ ಗ್ರಾಮಗಳಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖೆಗಳ ಪ್ರಮುಖ ನಾಗರಿಕ ಸೇವೆಗಳನ್ನು ನಾಗರಿಕರಿಗೆ ನೀಡುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದೊಂದಿಗೆ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಶ್ರೀ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದಲ್ಲಿ “ಗ್ರಾಮ್ ಒನ್ ಕೇಂದ್ರ” ಉದ್ಘಾಟಿಸಿ ಮಾತನಾಡಿದ ಅವರು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಈ ಗ್ರಾಮದಲ್ಲಿ ಗ್ರಾಮ್ ಒನ್ ಕೇಂದ್ರ ಸ್ಥಾಪನೆ ಮಾಡಿದ್ದಕ್ಕೆ ಅತ್ಯಂತ ಸಂತಸ ವ್ಯಕ್ತಪಡಿಸಿದ ಅವರು ಗ್ರಾಮೀಣ ಪ್ರದೇಶದ ನಾಗರಿಕರು ವಿವಿಧ ಸೇವೆಗಾಗಿ ಯಾವುದೇ ಕಚೇರಿಗೆ ಅಲೆಯಬಾರದೆಂಬ ಉದ್ದೇಶದಿಂದ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ರಾಜ್ಯದ ನಾಲ್ಕು ವಿಭಾಗದ “ಗ್ರಾಮ್ ಒನ್ ಕೇಂದ್ರ ಸ್ಥಾಪನೆ ಮಾಡಲು ವಿವಿಧ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಬೆಂಗಳೂರು-ದಾವಣಗೆರೆ, ಮೈಸೂರು-ಚಿಕ್ಕಮಗಳೂರು, ಬೆಳಗಾವಿ-ವಿಜಯಪುರ, ಕಲ್ಯಾಣ ಕರ್ನಾಟಕದ-ಬೀದರ್ ಜಿಲ್ಲೆ ಆಯ್ಕೆ ಮಾಡಲಾಗಿದೆ.
“ಗ್ರಾಮ್ ಒನ್ ಕೇಂದ್ರಗಳನ್ನು ಪ್ರಥಮ ಹಂತದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನವೆಂಬರ್ 19,2020 ರಂದು ನೂರು ಗ್ರಾಮಗಳಲ್ಲಿ ಸ್ಥಾಪನೆ ಮಾಡಲಾಯಿತು. ಪ್ರಾರಂಭದಲ್ಲಿ 150 ಸೇವೆಗಳಿದ್ದವು 8 ವರ್ಷದಲ್ಲಿ 1125 ಸೇವೆಗಳು ಪ್ರಾರಂಭ ಮಾಡಲಾಗಿದ್ದು ಶೇಕಡಾ 98 ರಷ್ಟು ಸೇವೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ 12ತಾಲೂಕುಗಳಲ್ಲಿ 193 ಗ್ರಾಮಗಳ ಪೈಕಿ ಒಟ್ಟು125 ಆಯ್ಕೆಯಾದ ಗ್ರಾಮಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಬಬಲೇಶ್ವರ 10, ಬಸವನ ಬಾಗೇವಾಡಿ10, ಚಡಚಣ 9, ದೇವರ ಹಿಪ್ಪರಗಿ 4, ಇಂಡಿ 22, ಕೋಲಾರ 6, ಮುದ್ದೇಬಿಹಾಳ 9, ನಿಡಗುಂದಿ 6, ಸಿಂದಗಿ 19, ತಾಳಿಕೋಟೆ 10, ತಿಕೋಟಾ 10, ವಿಜಯಪುರ 10, ಗ್ರಾಮ್ ಒನ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇಂದು ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪನೆ ಮಾಡಿದ್ದು ಈ ಕೇಂದ್ರದ ಸೇವೆಯಿಂದ ಹೊರ್ತಿ ಗ್ರಾಮವು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಸುನಿಲ್‍ಕುಮಾರ್ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ಗ್ರಾಮದ ಪ್ರತಿ ಪ್ರಜೆಗೂ ಗ್ರಾಮಮಟ್ಟದಲ್ಲಿ ಸರಕಾರದ ಸೇವೆಗಳು,ಲಭ್ಯವಾಗಬೇಕು.ವಿಶೀಷವಾಗಿ ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಇ. ಸೇವೆಗಳು, ಮತ್ತು ಸರಕಾರದ ಇನ್ನಿತರ ಸೇವೆಗಳು ಒಂದೇ ಸೂರಿನಡಿ ಕಲ್ಪಿಸುವ ಯೋಜನೆ ಇದಾಗಿದ್ದು,ಗ್ರಾಮ ಒನ್ ಕೇಂದ್ರವು ಪಿಪಿಪಿ ಮಾದರಿಯಲ್ಲಿ ರಚನೆಯಾಗಿದ್ದು ಖಾಸಗಿ ಸಂಸ್ಥೆಯವರು ಕೇಂದ್ರಕ್ಕೆ ಬೇಕಾದ ಎಲ್ಲ ತರಹದ ಭೌತಿಕ ಮತ್ತು ಐ. ಟಿ ಮೂಲ ಸೌಕರ್ಯಗಳ ಜೊತೆಗೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಸರಕಾರ ವ್ಯವಸ್ಥೆಗಳಿಗೆ ಆದ್ಯತೆ ಮತ್ತು ತಾಂತ್ರಿಕ ಸೇವೆಯನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.
ಈ ಕೇಂದ್ರದಲ್ಲಿ ಒಟ್ಟು 67 ಇಲಾಖೆಗಳಿದ್ದು 402 ಸೇವೆಗಳಿವೆ. ಅದರಲ್ಲಿ ಪ್ರಮುಖವಾದ ಸೇವೆಗಳೆಂದರೆ ಕಂದಾಯ ಇಲಾಖೆ, ಸಾಮಾಜಿಕ ಭದ್ರತಾ ಯೋಜನೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಹಕಾರ ಸಂಘಗಳ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇವೆಯನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಸೇರಿಸಲಾದ ಪ್ರಮುಖ ಸೇವೆಗಳು ಮೈಕ್ರೋ ಬ್ಯಾಂಕಿಂಗ್ ಸೇವೆಗಳು, ಇ-ಸ್ಟ್ಯಾಂಪ್ ಸೇವೆ, ಬಿ.ಎಸ್.ಎನ್.ಎಲ್.ಪಾವತಿ ಸೇವೆಗಳು, ಹೆಸ್ಕಾಂ ಬಿಲ್ ಪಾವತಿ ಸೇವೆಗಳು, ಎಲ್.ಇ.ಡಿ ಬಲ್ಬ್‍ಗಳ ಮಾರಾಟ ಸೇವೆ ಹಾಗೂ ಇತರೆ ಸೇವೆ ಒಳಗೊಂಡಿದೆ ಎಂದು ತಿಳಿಸಿದರು.
ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರಿಗೆ ಆನ್ ಲೈನ್ ಮುಖಾಂತರ ಈ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸರಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ಕಲ್ಪಿಸಬೇಕು .ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಲು ಹೆಚ್ಚು ಒತ್ತು ನೀಡಬೇಕು. ಸೇವಾ ಸೌಲಭ್ಯಗಳು ಅವರ ಮನೆಯ ಬಾಗಿಲಿಗೆ ತಲುಪಿಸಲು ಈ ಒಂದು ಕೇಂದ್ರವು ಬಹುಮುಖ್ಯವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸದುಪಯೋಗವಾಗಲಿಎಂದು ತಿಳಿಸಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಣ್ಣಪ್ಪ ಕಾಂಬಳೆ ಹಾಗೂ ಮೀರಾಬಾಯಿ ಕಾಂಬಳೆ, ಅವರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಆಯುಷ್ ಮಾನ್ ಭಾರತ ಗುರುತಿನ ಚೀಟಿಯನ್ನು ಮಳಸಿದ್ದಪ್ಪ ಬ್ಯಾಳಿ, ಬಸಪ್ಪ ಕನ್ನೊಳ್ಳಿ, ಹಾಗೂ ಪರಶುರಾಮ ವಡ್ಡರ್,ಅವರಿಗೆ ನೀಡಲಾಯಿತು. ಅದೇ ರೀತಿ ಕಾರ್ಮಿಕ ಇಲಾಖೆಯಿಂದ ಸೋಮಯ್ಯ , ಪರಸಪ್ಪ ಅವರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಾಪುರ, ಹೊರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಬಸಲಿಂಗಪ್ಪ ಪೂಜಾರಿ, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ, ದಯಾ ಸಾಗರ ಹಾಗೂ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.