ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಠಿಕ ಸಮಿತಿ ಸಕ್ರಿಯವಾಗಿ ಭಾಗವಹಿಸಿ: ಡಾ.ಜೆ.ಕಾವ್ಯಾ ಸಲಹೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಫೆ.೨೧;ಜನಾರೋಗ್ಯ ನಿರ್ವಹಣೆಯಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಠಿಕ ಸಮಿತಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜೆ.ಕಾವ್ಯಾ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮದಕರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಭವನದಲ್ಲಿ  ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಠಿಕ ಸಮಿತಿ ಸದಸ್ಯರಿಗೆ ವಿಶ್ವಾಸ್ ಆಂದೋಲನದ ತರಬೇತಿ ಉದ್ದೇಶಿಸಿ ಅವರು ಮಾತನಾಡಿದರು.ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 8 ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಠಿಕ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಸದಸ್ಯರಿಗೆ ಸಮಿತಿ ಬಲಪಡಿಸಲು, ಕ್ರಿಯಾಶೀಲರಾಗಿ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದು ತರಬೇತಿಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಸ್ಥಳೀಯವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕರಕಪ್ಪ ಮೇಟಿ ಮಾತನಾಡಿ, ಸಮಿತಿಗಳ ರಚನೆ, ಸದಸ್ಯರ ಜವಾಬ್ದಾರಿಗಳು. ನಿರ್ವಹಿಸಬೇಕಾದ ದಾಖಲಾತಿಗಳು, ಮುಕ್ತನಿಧಿಯ ಬಳಕೆ ಬಗ್ಗೆ ತಿಳಿಸಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಉಂಟಾಗುವ ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ವಿಶ್ವಾಸ್ ಆಂದೋಲನದ ಕ್ರಿಯಾ ಯೋಜನೆ ಪ್ರತಿ ತಿಂಗಳು ಒಂದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಆಂದೋಲನದ ಮುಖಾಂತರ ಜನ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹ ನಿಯಂತ್ರಣ, ತಾಯಿ ಮರಣ, ಮಕ್ಕಳ ಮರಣ, ಶೌಚಾಲಯ ಬಳಕೆ, ಕೈ ತೊಳೆಯುವ ವಿಧಾನ, ಜೀವನ ಶೈಲಿ , ಘನ ತ್ಯಾಜ್ಯ ವಿಲೇವಾರಿ, ರಾಷ್ಟ್ರೀಯ ಬಾಲಸ್ವಾಸ್ತ್ಯ ಕಾರ್ಯಕ್ರಮ, ರಾಷ್ಟ್ರೀಯ ಕೀಶೋರಿ ಸ್ವಾಸ್ಥ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.ತರಬೇತಿ ಕಾರ್ಯಾಗಾರದಲ್ಲಿ ವಿ.ಹೆಚ್.ಎಸ್.ಎನ್.ಸಿ ಸದಸ್ಯರಾದ ಸಾವಿತ್ರಮ್ಮ, ಮಂಜುನಾಥ, ಯಶೋದಮ್ಮ, ಲಕ್ಷ್ಮಿ, ಗ್ರಾಮದ ಹಿರಿಯ ನಾಗರಿಕರಾದ ಮೂರ್ತಪ್ಪ, ಆಶಾ ಕಾರ್ಯಕರ್ತೆಯರು ಇದ್ದರು.