ಗ್ರಾಮ ಆಡಳಿತ ಕಚೇರಿ ನಿರ್ಮಿಸಲು ಅನುದಾನ : ಶಾಸಕ ಕೆ ನೇಮಿರಾಜ್ ನಾಯ್ಕ್


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.02 ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರಿಗೆ ಗ್ರಾಮದಲ್ಲಿ ಕಚೇರಿಯನ್ನು ನಿರ್ಮಿಸಲು ನಿವೇಶನ ಒದಗಿಸಿದರೆ  ಅನುದಾನ ನೀಡಲಾಗುವುದು  ಎಂದು ಶಾಸಕ ಕೆ ನೇಮಿರಾಜ ನಾಯ್ಕ್ ಹೇಳಿದರು.
 ಪಟ್ಟಣದ ತಾಲೂಕ ಕಚೇರಿಯಲ್ಲಿ ಶನಿವಾರ ನಡೆದ ಕಂದಾಯ ದಿನಾಚರಣೆಯ ಹಾಗೂ ಪಿಂಚಣಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ನಿಮಗೆ ಸಿಕ್ಕಿರುವ ನೌಕರಿಯನ್ನು ಶ್ರದ್ಧೆ,ತಾಳ್ಮೆಯಿಂದ ಕಾರ್ಯನಿರ್ವಹಿಸುವ ಮೂಲಕ  ಒಳ್ಳೆಯ ಹೆಸರನ್ನು ಗಳಿಸಬೇಕು. ಜೀವನದಲ್ಲಿ ನಾವು ನೂರಾರು ವರ್ಷ ಬದುಕುವುದಿಲ್ಲ. ಬದುಕಿದ ದಿನಗಳಲ್ಲಿ ಸಾರ್ವಜನಿಕ ಸೇವೆ ಮಾಡುವ ಮೂಲಕ  ಸಿಕ್ಕಿರುವ ಅವಕಾಶವನ್ನು ಜನರಿಗಾಗಿ ಮುಡುಪಾಗಿಟ್ಟರೆ ಜೀವನ ಸಾರ್ಥಕವಾಗುತ್ತೆ. ಎಷ್ಟು ಜನ ಬಿ ಎ, ಬಿ ಕಾಮ್ ಎಂ ಎಸ್ಸಿ  ಮಾಡಿಕೊಂಡು ಕೆಲಸವಿಲ್ಲದೆ  ನಿರುದ್ಯೋಗದಲ್ಲಿದ್ದಾರೆ ಎಂದರು.
 ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ದೊಡ್ಡಬಸಪ್ಪ ರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿ ಬೇರೆ ಇಲಾಖೆಗಳ ಕಚೇರಿಗಳಿಗೆ  ಹೋಲಿಸಿದರೆ ಕಂದಾಯ ಇಲಾಖೆಯ ಕಚೇರಿಗಳಿಗೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದ ಕಚೇರಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಅನುಕೂಲವಾಗತ್ತದೆ. ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರ ಮನೆ ಬಾಗಿಲಿಗೆ ಸರಳವಾಗಿ ಸಿಗಬೇಕು. ನಮ್ಮ ಇಲಾಖೆಯ ಅಧಿಕಾರಿಗಳು  ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಕೆಲಸ ನಿರ್ವಹಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ಚಂದ್ರಶೇಖರ್ ಗಾಳಿ ಮಾತನಾಡಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ವ್ಯವಸ್ಥೆ ಗಮನದಲ್ಲಿಟ್ಟುಕೊಂಡು   ಆಡಳಿತಾತ್ಮಕ ವಿವೇಚನೆ ಶಕ್ತಿ ಇಟ್ಟುಕೊಂಡು ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಸೇವೆ ಮಾಡಲು ಸಾಧ್ಯ.ಅಧಿಕಾರಿಗಳ ವಿವೇಚನೆ ಶಕ್ತಿ ಹೆಚ್ಚಾಗುವುದರೊಂದಿಗೆ ಕಾನೂನು ರಕ್ಷಣೆ ಸಿಗುತ್ತದೆ ಎಂದರು.
 ತಾಲೂಕಿನಲ್ಲಿ ಒಟ್ಟು 300 ಪಿಂಚಣಿ ಪ್ರಮಾಣ ಪತ್ರ ವಿತರಿಸಲಾಗುವುದು.. ಸಾಂಕೇತಿಕವಾಗಿ ಐದು ಮಂದಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸಿದರು.
 ಈ ಸಂದರ್ಭದಲ್ಲಿ ಉಪ ತಾಹಸೀಲ್ದಾರ್ ವಿಶ್ವೇಶ್ವರಯ್ಯ, ಎ ಡಿ ಎಲ್ ಆರ್ ಬಸವರಾಜ್ ರೋಣದ್, ಗ್ರಾಮ ಆಡಳಿತ ಜಿಲ್ಲಾಧ್ಯಕ್ಷ ಯಂಕಾರೆಡ್ಡಿ, ತಾಲೂಕ ಅಧ್ಯಕ್ಷ ಗಣೇಶ್, ಗ್ರಾಮಸಹಾಯಕ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ, ತಾಲೂಕ ಅಧ್ಯಕ್ಷ ಕರಿಬಸಪ್ಪ ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು