ಗ್ರಾಮೀಣ ಹಾಗೂ ಪಟ್ಟಣಗಳ ಅಧಿಕ ಜನರಿಗೆ ಎಚ್‍ಡಿಎಫ್‍ಸಿ ಬ್ಯಾಂಕ್ ಸೇವಾ ಸೌಲಭ್ಯದ ಗುರಿ

ಕಲಬುರಗಿ,ಜು.21: ಉತ್ತರ ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿ ಉತ್ಪಾದನಾ ಸಂಘಟನೆಗಳು ಮತ್ತು ಅಗ್ರಿ ಸ್ಪಾರ್ಟ್ ಅಪ್‍ಗಳಿಗೆ ಎಚ್‍ಡಿಎಫ್‍ಸಿ ಬ್ಯಾಂಕ್ ಪ್ರಯೋಜನ ಒದಗಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಗ್ರಾಮೀಣ ಸಾಲ ಮೇಳ ಆಯೋಜಿಸಲಾಗಿದೆ. ಗ್ರಾಮೀಣ ಹಾಗೂ ಅರೆ ನಗರ ಪ್ರದೇಶದ 20000ಕ್ಕೂ ಹೆಚ್ಚು ಜನರಿಗೆ ತಲುಪುವ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ಬ್ಯಾಂಕಿನ ವಿಭಾಗೀಯ ಮುಖ್ಯಸ್ಥ ರಾಹುಲ್ ಶ್ಯಾಮ್ ಶುಕ್ಲಾ ಅವರು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು, ವ್ಯಾಪಾರಿಗಳು, ರೈತ ಉತ್ಪಾದಕ ಸಂಸ್ಥೆಗಳು, ಅಗ್ರಿ ಸ್ಟಾರ್ಟ್ ಅಪ್‍ಗಳು, ಸಣ್ಣ ಕೃಷಿ ಉದ್ಯಮಿಗಳು, ಸಾಗಾಣಿಕೆದಾರರು, ಅಂಗಡಿಯವರು, ಆರೋಗ್ಯ ಉದ್ಯಮಗಳು ಮತ್ತು ಎಂಎಸ್‍ಎಂಇಗಳು ಸೇರಿದಂತೆ 500 ಗ್ರಾಮಗಳಿಂದ 6000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ ಎಂದರು.
ಬ್ಯಾಂಕಿನ ವಾಣಿಜ್ಯಕ ಮತ್ತು ಗ್ರಾಮೀಣ ಬ್ಯಾಂಕಿಂಗ್ ಗ್ರೂಪ್‍ನ ವತಿಯಿಂದ ಆಯೋಜಿಸಿದ ಮೇಳವು ಸಂಭಾವ್ಯ ಗ್ರಾಹಕರಿಗೆ ಬ್ಯಾಂಕಿನ ಉತ್ಪನ್ನಗಳಾದ ಕೃಷಿ ಸಾಲ, ಆರೋಗ್ಯ ಕಾಳಜಿ ಹಣಕಾಸು, ವಾಹನಗಳಿಗೆ ಸಾಲ, ವಾಣಿಜ್ಯ ಉದ್ದೇಶದ ವಾಹನಗಳಿಗೆ ಸಾಲ ಮುಂತಾದ ಬ್ಯಾಂಕಿಂಗ್ ಸೇವೆಗಳ ಕುರಿತು ತಿಳಿಯಲು ಅವಕಾಶವನ್ನು ನೀಡಿದೆ. ಇದರ ಜೊತೆಗೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಒದಗಿಸುವ ಕೆಲಸದ ಬಂಡವಾಳದ ಸಾಲಗಳು, ಅವಧಿ ಸಾಲಗಳು, ಕ್ರೆಡಿಟ್ ಪತ್ರಗಳು, ಬ್ಯಾಂಕ್ ಗ್ಯಾರಂಟಿಗಳ ಮಾಹಿತಿಯನ್ನು ಮೇಳವು ನೀಡಿದೆ ಎಂದು ಅವರು ಹೇಳಿದರು.
ಪ್ರಸ್ತುತ ಎಚ್‍ಡಿಎಫ್‍ಸಿ ಬ್ಯಾಂಕ್‍ನ 52 ಶಾಖೆಗಳು ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿವೆ. ಬ್ಯಾಂಕಿನ ಖಾತೆಯ ಶೇಕಡಾ 38ರಷ್ಟು ಸಾಲವನ್ನು ವಾಣಿಜ್ಯ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಪೂರೈಸಿದೆ. ಹಣಕಾಸಿನ ಅವಕಾಶವನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಇಂತಹ ಸಾಲ ಮೇಳ ಆಯೋಜಿಸಲಾಗುತ್ತಿದೆ. ನಮ್ಮ ಗುರಿಯು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿನ ರೈತರು ಮತ್ತು ಸಣ್ಣ ಹಾಗೂ ಅತೀ ಸಣ್ಣ ವ್ಯಾಪಾರಸ್ಥರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಗೊಳಿಸುವುದಾಗಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ವರ್ಷ ಅಂತರ್ರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಆ ಹಿನ್ನೆಲೆಯಲ್ಲಿ ಬ್ಯಾಂಕ್ ಈ ಪ್ರದೇಶದ ಸಿರಿಧಾನ್ಯ ಬೆಳೆಗಾರರಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಜಿಲ್ಲೆಯ ರೈತರು ಸಿರಿಧಾನ್ಯ ಬೇಸಾಯದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ರೈತರ ಜೊತೆ ಆದ್ಯತೆಯ ಬ್ಯಾಂಕಿಂಗ್ ಪಾಲುದಾರರಾಗಲು ನಮಗೆ ಸಂತೋಷದ ಸಂಗತಿ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಬ್ಯಾಂಕ್ 448 ಶಾಖೆಗಳನ್ನು ಹೊಂದಿದೆ. 180 ಸ್ಥಳಗಳಲ್ಲಿ ವಿಸ್ತರಿಸಲಾಗಿದೆ. 384 ವ್ಯಾಪಾರ ವರದಿಗಾರ ಜಾಲದಿಂದ ಬೆಂಬಲಿತವಾಗಿದೆ. ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿಯ ವರದಿಯ ಪ್ರಕಾರ ಎಚ್‍ಡಿಎಫ್‍ಸಿ ಬ್ಯಾಂಕ್ ಕರ್ನಾಟಕದ ಮೂರನೇ ಅತೀ ದೊಡ್ಡ ಎಂಎಸ್‍ಎಂಇ ಬ್ಯಾಂಕ್ ಆಗಿದೆ. ಕಳೆದ ಮಾರ್ಚ್ 31ಕ್ಕೆ 15,151 ಕೋಟಿ ರೂ.ಗಳ ಗಾತ್ರವನ್ನು ಬ್ಯಾಂಕ್ ಹೊಂದಿದೆ. ಇದು ಹಿಂದಿನ ವರ್ಷಕ್ಕಿಂತಲೂ ಶೇಕಡಾ 44ರಷ್ಟು ಹೆಚ್ಚಿನ ಬೆಳವಣಿಗೆಯಾಗಿದೆ. ಬ್ಯಾಂಕ್ ದೇಶಾದ್ಯಂತ 688 ಜಿಲ್ಲೆಗಳಲ್ಲಿ ಎಸ್‍ಎಂಇಗಳಿಗೆ ಸಾಲವನ್ನು ವಿಸ್ತರಿಸುತ್ತದೆ. ಸುಮಾರು 2.5 ಲಕ್ಷ ಗ್ರಾಮಗಳಿಗೆ ಕೃಷಿ ಹಣಕಾಸು ಒದಗಿಸಲು ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಈ ವರ್ಷದ ಆರಂಭದಲ್ಲಿ ಬ್ಯಾಂಕ್ ಗ್ರಾಮೀಣ ಸಾಲ ಮೇಳಗಳನ್ನು ಉತ್ತರ ಪ್ರದೇಶದ ಝಾನ್ಸಿ, ಆಂಧ್ರಪ್ರದೇಶದ ಏಲೂರು ಮತ್ತು ಪಶ್ಚಿಮ್‍ಬಂಗಾಳದ ಬರದ್ವಾನ್ ನಗರಗಳಲ್ಲಿ ಆಯೋಜಿಸಿದೆ. ಜೂನ್ 30ಕ್ಕೆ ದೇಶಾದ್ಯಂತ ಬ್ಯಾಂಕ್‍ನ ವಿಸ್ತರಣಾ ಜಾಲವು 7,860 ಶಾಖೆಗಳಲ್ಲಿ ಮತ್ತು 20,352 ಎಟಿಎಂಗಳ ನಗದು ಠೇವಣಿ ಮತ್ತು ಹಿಂತೆಗೆದುಕೊಳ್ಳುವ ಯಂತ್ರಗಳನ್ನು 3,825 ನಗರಗಳಲ್ಲಿ ಹೊಂದಿದೆ ಎಂದು ಅವರು ಹೇಳಿದರು.
ಇದರ ಅರ್ಧದಷ್ಟು ಶಾಖೆಗಳು ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿವೆ. ಹೆಚ್ಚುವರಿಯಾಗಿ ಬ್ಯಾಂಕ್ 15194 ವ್ಯಾಪಾರ ವರದಿಗಾರರನ್ನು ಹೊಂದಿದೆ ಮತ್ತು ಪ್ರಾಥಮಿಕವಾಗಿ ಸಾಮಾನ್ಯ ಸೇವಾ ಕೇಂದ್ರಗಳ ಸಹಾಯದಿಂದ ತನ್ನ ಕೊಡುಗೆಗಳನ್ನು ಆಳವಾದ ಭೌಗೋಳಿಕ ಪ್ರದೇಶಗಳಿಗೆ ಕೊಂಡೊಯ್ಯಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಪಾಟೀಲ್ ಮತ್ತು ಸಂಗಪ್ಪ ಜೆ., ಅವರು ಉಪಸ್ಥಿತರಿದ್ದರು.