ಗ್ರಾಮೀಣ ಹಾಗೂ ನರೇಗಾ ಕೂಲಿಕಾರರ ಆರೋಗ್ಯ ಸುಧಾರಣೆಗೆಉಚಿತ ಆರೋಗ್ಯ ಶಿಬಿರ : ಸದುಪಯೋಗಕ್ಕೆ ಕರೆ

ವಿಜಯಪುರ:ಮೇ.25 ಗ್ರಾಮೀಣರ ಹಾಗೂ ನರೇಗಾ ಕೂಲಿಕಾರರ ಆರೋಗ್ಯ ಸುಧಾರಣೆ ಜೊತೆಗೆ ಗ್ರಾಮದ ಆರೋಗ್ಯ ಸದೃಢಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೇ 22 ರಿಂದ ಜೂನ್ 22ರ ವರೆಗೆ ಗ್ರಾಮ ಆರೋಗ್ಯ ಅಭಿಯಾನದ ಅಂಗವಾಗಿ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ನರೇಗಾ ಸ್ಥಳದಲ್ಲಿ ಬುಧವಾರ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.
ತಾಲೂಕಿನ ಬಸರಕೋಡ ಗ್ರಾಮದ ಕೆರೆ ಪಕ್ಕದ ನರೇಗಾ ಕಾಮಗಾರಿ ಸ್ಥಳದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಬಸರಕೋಡ ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಅಭಿಯಾನದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ತಾಲೂಕಾ ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಬಿ.ವೈ.ತಾಳಿಕೋಟಿ ಅವರು ಮಾತನಾಡಿ, ಆರೋಗ್ಯ ಸುಧಾರಣೆಗೆ ಹಮ್ಮಿಕೊಂಡ ಈ ಶಿಬಿರದ ಸದುಪಯೋಗ ನರೇಗಾ ಕೂಲಿಕಾರರು ಪಡೆದುಕೊಳ್ಳಬೇಕು. ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನರೇಗಾ ಕೂಲಿಕಾರರಿಗೆ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಬಿಪಿ. ಶುಗರ್, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು ನರೇಗಾ ಕಾಮಗಾರಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ 120ಕ್ಕೂ ಹೆಚ್ಚು ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲವ್ವ ಚಲವಾದಿ, ನರೇಗಾ ಜಿಲ್ಲಾ ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ, ಕೆ.ಎಚ್.ಪಿ.ಟಿ ಜಿಲ್ಲಾ ಸಂಯೋಜಕರಾದ ಡಿ.ಹೆಚ್.ನದಾಫ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಆಶ್ವಿನಿ ಚಲವಾದಿ, ಎಂ.ಎಂ.ಯಾಳವಾರ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಭಾರತಿ ಸಿನ್ನೂರ, ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಕೆ.ಎಚ್.ಪಿ.ಟಿ ತಾಲೂಕು ಸಂಯೋಜಕರಾದ ಪ್ರಭುಗೌಡ ಬಿರಾದಾರ ಉಪಸ್ಥಿತರಿದ್ದರು.