ಗ್ರಾಮೀಣ ಸಮಾಜದ ಸಾಮಾಜಿಕ ಮೌಲ್ಯಗಳು ಇಂದಿಗೂ ಪ್ರಸ್ತುತ: ಹಾಸಿಂಪೀರ ವಾಲಿಕಾರ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.5: ಸಹಕಾರ ಮನೋಭಾವ, ನಾಯಕತ್ವ ಮತ್ತು ಸೇವಾ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಗುರಿ, ಉದ್ದೇಶಗಳನ್ನು ಹೊಂದಿದ ರಾಷ್ಟ್ರೀಯ ಸೇವಾ ಯೋಜನೆಯು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ಸಂಸ್ಕøತಿ, ಸಂಸ್ಕಾರ, ಸಹಬಾಳ್ವೆ, ಸದ್ಭಾವನೆಗಳು ಗ್ರಾಮೀಣ ಸಮಾಜದ ಮೌಲ್ಯಗಳಾಗಿದ್ದು, ಅವು ಇಂದಿಗೂ ಪ್ರಸ್ತುತವಾಗಿವೆ ಇಂತಹ ಶ್ರೇಷ್ಠ ಗುಣಗಳನ್ನು ಎನ್.ಎಸ್.ಎಸ್. ಶಿಬಿರದ ಮುಖಾಂತರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ-1 ಮತ್ತು ಘಟಕ-2 ಸಹಯೋಗದಲ್ಲಿ ಬರಟಗಿ ಗ್ರಾಮದಲ್ಲಿ ಹಮ್ಮಿಕೊಂಡ 2023ರ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಧುನೀಕರಣದತ್ತ ಮಾರುಹೋಗುತ್ತಿರುವ ನಗರದ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಆದರ್ಶ, ಆಚರಣೆಗಳನ್ನು, ನೆಮ್ಮದಿಯ ಬದುಕಿನ ಸೂತ್ರಗಳನ್ನು ಅನ್ವಯ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾದ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಸಂಗಪ್ಪ ದೇಗಿನಾಳ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ. ಶಿಕ್ಷಣದ ಜೊತೆ ರಾಷ್ಟ್ರ ಪ್ರೇಮ, ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಒಳಿತಿಗಾಗಿ ಸ್ವಾರ್ಥವನ್ನು ಬದಿಗಿಟ್ಟು ನಾವೆಲ್ಲ ಭಾರತೀಯರು ನಾವೆಲ್ಲ ಒಂದೇ ಎಂಬ ಸಂಕಲ್ಪ ತಾಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಆಯ್.ಬಿ. ಚಿಪ್ಪಲಕಟ್ಟಿ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಎನ್.ಎಸ್.ಎಸ್. ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದಲ್ಲಿ ಗ್ರಾಮೀಣ ಸೇವೆಗೆ ಬದ್ಧರಾಗಬೇಕು. ನಮ್ಮ ಸುತ್ತಲಿನ ಪರಿಸರ ಶುಚಿಯಾಗಿಟ್ಟುಕೊಂಡು ನೆಮ್ಮದಿಯ ಬದುಕನ್ನು ನಡೆಸಬೇಕು ಎಂದರು.
ಪ್ರೊ. ಸುಭಾಸಚಂದ್ರ ಕನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ವಿದ್ಯಾರ್ಥಿ ಪ್ರತಿನಿಧಿ ನಿರೂಪಾದೀಶ, ಅಖಿಲೇಶ ವೇದಿಕೆ ಮೇಲಿದ್ದರು.
ಕುಮಾರಿ ಚೈತ್ರ ಮಂಗೊಂಡ ಸ್ವಾಗತಿಸಿದರು. ರಶ್ಮಿ ಕುಮಟಗಿ ಮತ್ತು ಸಂಗಡಿಗರು ಎನ್.ಎಸ್.ಎಸ್. ಗೀತೆ ಹಾಡಿದರು. ಅಖಿಲಾ ಮಾಳಪ್ಪಗೋಳ ನಿರೂಪಿಸಿದರು. ಕೀರ್ತಿ ಬೆನಕನಹಳ್ಳಿ ವಂದಿಸಿದರು. ಎನ್.ಎಸ್.ಎಸ್. ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಿಜಯಕುಮಾರ ತಳವಾರ, ಪ್ರೊ. ಪ್ರದೀಪ ಕುಂಬಾರ, ಪ್ರೊ. ಸ್ನೇಹಾ ಬೆನಕಟ್ಟಿ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.