ಗ್ರಾಮೀಣ ಶಾಸಕ ನಾಗೇಂದ್ರ ಸಚಿವರಾಗಿ  ನಾಳೆ ಪ್ರಮಾಣ ವಚನ


* ಬಿಜೆಪಿ ಉನ್ನತ ನಾಯಕ  ಶ್ರೀರಾಮುಲು‌ ಸೋಲಿಸಿದ ಹೆಗ್ಗಳಿಕೆ
* ಮೊದಲ ಬಾರಿಗೆ ಸಚಿವ ಸ್ಥಾನ
* 4 ನೇ ಬಾರಿಗೆ ಶಾಸಕರಾಗಿ ಅಯ್ಕೆ
* ಬಳ್ಳಾರಿಯಲ್ಲಿಯೇ ಹುಟ್ಟಿ ಬೆಳೆದಿದ್ದು. ಬಿ.ಕಾಂ ವಿದ್ಯಾಭ್ಯಾಸ
* ಸಾವಿರಾರು ಬೆಂಬಲಿಗರು ಬೆಂಗಳೂರಿಗೆ ತೆರಳಲು ಸಿದ್ದತೆ.
ಎನ್.ವೀರಭದ್ರಗೌಡ
ಬಳ್ಳಾರಿ, ಮೇ.26: ನಗರದಲ್ಲಿಯೇ ಹುಟ್ಟಿ ಬೆಳೆದರೂ ತಾಯಿ ತವರು ಮನೆ ಗುಮ್ಮನೂರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡು ಗುಮ್ಮನೂರು ನಾಗೇಂದ್ರ ಎಂದೇ ಹೆಸರುವಾಸಿಯಾಗಿರುವ  ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರು ನಾಳೆ  ಬೆಂಗಳೂರಿನಲ್ಲಿ ಬೆಳಿಗ್ಗೆ ನಡೆಯುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ  ಸಂಪುಟ ವಿಸ್ತರಣೆಯಲ್ಲಿ   ಮೊದಲ‌ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಖ ಖಚಿತವಾಗಿದೆ. 
ಕುಟುಂಬ:
ಜನನ  15.09.1971 ಬಿ ಆಂಜಿನೇಯಲು ಮತ್ತು ಬಿ ಲಕ್ಷ್ಮೀದೇವಿ ಅವರ ದ್ವಿತೀಯ ಸುಪುತ್ರನಾಗಿ 1971 ರ ಸೆ.15 ರಂದು ಜನಿಸಿದ ನಾಗೇಂದ್ರ ಅವರು  ಪತ್ನಿ ಬಿ. ಮಂಜುಶ್ರೀ
ಮಕ್ಕಳಾದ ವಿಷ್ಣು ತಾರಕ್, ರಾಣಕ್ ರತ್ನಾ ಸಹೋದರ. ಬಿ ವೆಂಕಟೇಶ್ ಪ್ರಸಾದ್ ಮತ್ತು ಇಬ್ಬರು ಸಹೋದರಿಯರ ಕುಟುಂಬ.
ವಿದ್ಯಾಭ್ಯಾಸ:
ಬಳ್ಳಾರಿ ನಗರದಲ್ಲೇ ವಿದ್ಯಾಭ್ಯಾಸ ಮಾಡಿದ ಇವರು 1 ರಿಂದ  5  ನೇ ತರಗತಿಯನ್ನು ಬಾಲಾಜಿ ರಾವ್ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.  6,7 ಮತ್ತು  8 ನೇ ತರಗತಿಯನ್ನು  ಸೇಂಟ್ ಜಾನ್ ನಂತರ
9 ಮತ್ತು 10 ನೇ ತರಗತಿಯನ್ನು ಮುನಿಸಿಪಲ್ ಹೈಸ್ಕೂಲ್ ನಲ್ಲಿ ಪಿಯುಸಿಯನ್ನು ಮುನಿಸಿಪಲ್ ಕಾಲೇಜ್ ಹಾಗು ಬಿಕಾಂ ಪದವಿಯನ್ನು ವೀರಶೈವ ಕಾಲೇಜುನಲ್ಲಿ ಅಭ್ಯಾಸ ಮಾಡಿದ್ದಾರೆ.
ಬಿಸಿನೆಸ್:
ವಿದ್ಯಾಭಾಸದ ನಂತರ ನಗರದಲ್ಲಿ ವಿವಿದ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡು  ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಅವರ ಹಿಂಬಾಲಕರಾಗಿ ಬೆಳೆದರು.  ಕೇಬಲ್ ಗಲಾಟೆಯೊಂದರಲ್ಲಿ ನಡೆದ ಗಲಾಟೆಯಲ್ಲಿ ತಮ್ಮ ಬೆಂಬಲಕ್ಕೆ  ದಿವಾಕರ ಬಾಬು ನಿಲ್ಲಲಿಲ್ಲ ಎಂಬ ಕಾರಣಕ್ಕೆ. ಆಗಷ್ಟೇ ಪ್ರವರ್ಧ ಮಾನಕ್ಕೆ ಬರುತ್ತಿದ್ದ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಅವರ ಗುಂಪಿಗೆ ಬಿಜೆಪಿ ಪಕ್ಷದ ಮೂಲಕ 2004 ರಲ್ಲಿ ಸೇರಿದರು.
ರೆಡ್ಡಿ ಬಳಗದಲ್ಲಿ:
ಅದಿರು ಸಾಗಾಣಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡು ರೆಡ್ಡಿ ಬಳಗದೊಂದಿಗೆ ವ್ಯವಾಹರ ನಡೆಸುತ್ತ ಅರ್ಥಿಕವಾಗಿ ಮತ್ತು ಸಾವಿರಾರು ಹಿಂಬಾಲಕರ ಗುಂಪಿನಿಂದ ಪ್ರವರ್ಧಮಾನಕ್ಕೆ ಬಂದರು.
ಅಕ್ರಮ ಅದಿರು ಸಾಗಾಣಿಕೆ ಪ್ರಕರಣದಲ್ಲಿ ಜಬಾರ್ಧನ ರೆಡ್ಡಿ ಅವರ ಜೊತೆ ಒಂದು ವರೆ ವರ್ಷಗಳ ಕಾಲ ಸಿಬಿಐನಿಂದ ಬಂಧಿತರಾಗಿ ಜೈಲುವಾಸ ಅನುಭವಿಸಿ, ಜಾಮೀನು ಪಡೆದುಕೊಂಡಿದ್ದಾರೆ. ಇನ್ನೂ ಹತ್ತಾರು ಪ್ರಕರಣಗಳ‌ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ.
ರಾಜಕೀಯಕ್ಕೆ
ಬಳ್ಳಾರಿಯಲ್ಲಿಯೇ ಹುಟ್ಟಿ ಬೆಳೆದ ನಾಗೇಂದ್ರ ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ 2008 ರಲ್ಲಿ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ ಆ ಕ್ಷೇತ್ರದಲ್ಲಿ ಆಗ ಶ್ರೀರಾಮುಲು ಅವರು ಸ್ಪರ್ಧೆ ಮಾಡಲು ಬಯಸಿಧದರಿಂದ ಜನಾರ್ಧನರೆಡ್ಡಿ ಅವರ ಮಾರ್ಗದರ್ಶನದಂತೆ ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು.
ಆದರೆ ಈ ಮಧ್ಯೆ ನಡೆದ ರಾಜಕೀಯ ಬೆಳವಣಿಗೆ, ಅಕ್ರಮ ಅದಿರು ಸಾಗಾಣಿಕೆ ಆರೋಪ ಜೈಲುವಾಸದಿಂದ ಬೇಸತ್ತು. ಶ್ರಿರಾಮುಲು ರೆಡ್ಡಿ ಬಳಗದಲ್ಲಿಯೇ ಇದ್ದರೂ, ಶ್ರೀರಾಮುಲು‌ ಸ್ಥಾಪಿಸಿದ ಬಿಎಸ್ ಆರ್ ಪಕ್ಷಕ್ಕೆ ಹೋಗದೆ. ಬಿಜೆಪಿ ತೊರೆದು ಪಕ್ಷೇತರರಾಗಿ 2013 ರಲ್ಲಿ ಕೂಡ್ಲಗಿಯಲ್ಲಿಯೇ ಸ್ಪರ್ಧೆ ಮಾಡಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ನಂತರ 2013 ರಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಹೊಸಪೇಟೆಯಲ್ಲಿ‌ ನಡೆದ ಸಮಾವೇಶದಲ್ಲಿ  ಕಾಂಗ್ರೆಸ್ ಪಕ್ಷ ಸೇರಿ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ. ಶ್ರೀರಾಮುಲು ಅವರ ಸಹೋದರ ಸಣ್ಣ ಪಕ್ಕೀರಪ್ಪ ಅವರನ್ನು ಸೋಲುಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಈ ಬಾರಿ 2023 ರಲ್ಲಿ ನಡೆದ ಚುನಾವಣೆಗೆ ಬಿಜೆಪಿ ಉನ್ನತ ನಾಯಕ ಬಿ.ಶ್ರೀರಾಮುಲು ಬಂದು ಸ್ಪರ್ಧೆ ಮಾಡುತ್ತಾರೆ ಎಂದಾಗಲೂ ದೃತಿಗೆಡದೆ. ಗಟ್ಟಿ ಧೈರ್ಯದಿಂದ ಆ ದೇವರು ಒಬ್ವರನ್ನು ಬಿಟ್ಟರೆ ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಲಿ ನಾನು ಗೆಲೆಯುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನಾಡಿ. ಅದರಂತೆ ಶ್ರೀರಾಮುಲು‌ ವಿರುದ್ದ ಗೆದ್ದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಸಚಿವ ಸ್ಥಾನ:
ಬಿಜೆಪಿಯ ಉನ್ನತ ನಾಯಕ ಶ್ರೀರಾಮುಲು ಅವರನ್ನು ಸೋಲಿಸಿದ್ದಕ್ಕೆ, ನಾಲ್ಕನೇ ಬಾರಿಗೆ ಶಾಸಕರಾಗಿದ್ದು. ಬಳ್ಳಾರಿ ಜಿಲ್ಲೆಯ ವಾಲ್ಮೀಕಿ ಸಮದಾಯದಲ್ಲಿ ಶ್ರೀರಾಮುಲುಗೆ ಪರ್ಯಾಯ ನಾಯಕನಾಗಿ ಬೆಳೆಯಲು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ಅನುಕೂಲವಾಗುವಂತೆ ಈಗ ಸಚಿವ ಸ್ಥಾನ ನೀಡಲಾಗುತ್ತಿದೆಂದು ತಿಳಿದು ಬಂದಿದೆ.
ಇತ್ತ ನಾಗೇಂದ್ರ ಅವರ ಬೆಂಬಲಿಗರು ತಮ್ಮ ನಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಲು ಬೆಂಗಳೂರಿಗೆ ತೆರಳಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಪಕ್ಷದ ಉನ್ನತ ನಾಯಕರಿಂದ ಸಚಿವ ಸ್ಥಾನ ಖಚಿತವಾಗಿದೆ. ಇದು ಕಾಂಗ್ರೆಸ್ ಪಕ್ಷ ಪಟ್ಟಿ ಹೊರ ಬಿದ್ದಾಗಲೇ ಎಲ್ಲವುದೂ ಗ್ಯಾರೆಂಟಿ
ಬಿ.ನಾಗೇಂದ್ರ, ಗ್ರಾಮೀಣ ಶಾಸಕರು, ಬಳ್ಳಾರಿ.