ಗ್ರಾಮೀಣ ಶಾಸಕರಿಂದ ರಸ್ತೆ ದುರಸ್ಥಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.10: ತಾಲೂಕಿನ ಬೆಣಕಲ್ಲು ಗ್ರಾಮದ ರೈತರು ಸಂಚರಿಸುವ ರಸ್ತೆಯನ್ನು ಗ್ರಾಮೀಣ ಶಾಸಕ ನಾಗೇಂದ್ರ ಅವರು ರೈತರಿಗೆ ಕೊಟ್ಟ ಮಾತಿನಂತೆ ರಸ್ತೆಯನ್ನು ದುರಸ್ಥಿ ಮಾಡಿಸುತ್ತಿದ್ದಾರೆ.
ಮುಖ್ಯ ರಸ್ತೆಯಿಂದ  ರೈತರ ಹೊಲಗದ್ದೆಗಳಿಗೆ  ಸಂಪರ್ಕಿಸುವ ಸುಮಾರು 4. ಕಿ.ಮೀ. ರಸ್ತೆ ಮಳೆಯಿಂದ ಹಾಳಾಗಿತ್ತು. ಇದರಿಂದ ರೈತರು ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆಗಾಗಿ ತೆರಳಲು ಸಂಕಷ್ಟ ಅನುಭವಿಸುತ್ತಿದ್ದರು.
ಈ ಸಮಸ್ಯೆಯಿಂದ ರೋಸಿ ಹೋದ ರೈತರು,ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರನ್ನು ಭೇಟಿಯಾಗಿ ತಮಗೆ ರಸ್ತೆಯನ್ನು ದುರಸ್ತಿಗೊಳಿಸಿ ಕೊಡುವಂತೆ ಮನವಿಯನ್ನು ಮಾಡಿದ್ದರು, ಮನವಿಯನ್ನು ಸ್ವೀಕರಿಸಿದ ಶಾಸಕರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ರೈತರಿಗೆ ಕೊಟ್ಟ ಮಾತಿನಂತೆಯೇ  ಶಾಸಕರು ಬೆಣಕಲ್ಲು ಗ್ರಾಮದ  ಬನ್ನಿಮಹಾಂಕಾಳಮ್ಮ ಕಟ್ಟೆಯಿಂದ ಹಳ್ಳದವರೆಗಿನ ನಾಲ್ಕು ಕಿ.ಮೀ. ರಸ್ತೆಯನ್ನು ರೈತರಿಗೆ ಅನುಕೂಲವಾಗುವಂತೆ ಹಿಟಾಚಿ ಮೂಲಕ ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಈ ರಸ್ತೆಯನ್ನು ಸಂಪೂರ್ಣವಾಗಿ ತಮ್ಮ ಸ್ವಂತ ಖರ್ಚಿನಲ್ಲೇ ರೈತರಿಗೆ ಅನುಕೂಲವಾಗುವಂತೆ ದುರಸ್ತಿಗೊಳಿಸುವುದು ನನ್ನ ಜವಾಬ್ದಾರಿ ಎಂದು ಅವರು  ತಿಳಿಸಿದ್ದಾರೆ.