ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿ

ಅರಸೀಕೆರೆ, ನ. ೧೧- ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರ ಆಡಳಿತದಲ್ಲಿ ವಿವಿಧ ಸಾಮಾಜಿಕ ಪ್ರಯೋಗಗಳಿಗೆ ತನ್ನನ್ನು ತಾನೇ ತೆರೆದುಕೊಂಡ ಕ್ಷೇತ್ರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಪಿಪಿ ವೃತ್ತದ ಬಳಿ ಇರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನಡೆದ ಜ್ಞಾನತಾಣ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳವು ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ನೈತಿಕತೆ ಸರಳತೆ ಸಾಂಸ್ಕೃತಿಕ ತಾಣವಾಗಿದೆ. ಧರ್ಮಸ್ಥಳ ಕೇವಲ ಸ್ಥಳದ ಹೆಸರಲ್ಲ ಅದು ಪರಂಪರಾಗತ ದೈವಿಕ ಸಂಕೇತ ಮತ್ತು ವಿಶ್ವಾಸದ ಪ್ರತೀಕ ಸರ್ವಧರ್ಮ ಸಮನ್ವಯ ಎನ್ನುವ ಸಂಪ್ರದಾಯವನ್ನು ಕ್ಷೇತ್ರದಲ್ಲಿ ಅನುಸರಿಸಿಕೊಂಡು ಬರುತ್ತಿದೆ ಎಂದು ಬಣ್ಣಿಸಿದರು.
ಕೋವಿಡ್-೧೯ ಸೋಂಕಿನಿಂದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ ಉತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳಲ್ಲಿ ಅಂತರ್ಜಾಲದ ಶಿಕ್ಷಣದ ಮಹತ್ವ ತಿಳಿಸಲು ಜ್ಞಾನತಾಣ ಯೋಜನೆ ಸಹಕಾರಿಯಾಗಲಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯುವಂತಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ವಿನಾಯಕ ಪೈ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಂತರ್ಜಾಲದ ಬಳಕೆ ಹೆಚ್ಚುತ್ತಿದೆ. ಮನೆ ಪಾಠಗಳು ಕಣ್ಮರೆಯಾಗಿ ಮೊಬೈಲ್ ಪಾಠಗಳು ಹೊಸ ಆಕರ್ಷಣೆಯಾಗಿವೆ. ಇದಕ್ಕಾಗಿ ದೇಶದಲ್ಲಿ ಅಂತರ್ಜಾಲ ಪಾಠವನ್ನು ಮಾಡುವ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಶಿಕ್ಷಣದ ವ್ಯವಸ್ಥೆಯಲ್ಲಿ ಶ್ರೀಮಂತ ಮತ್ತು ಬಡ ಮಕ್ಕಳ ನಡುವೆ ಅಂತರ್ಜಾಲ ಶಿಕ್ಷಣ ಒಂದು ಕಂದರವಾಗಿದೆ ಗಮನಿಸಿದ ವೀರೇಂದ್ರ ಹೆಗ್ಗಡೆಯವರು ಕೋವಿಡ್-೧೯ ಸಮಸ್ಯೆಯಿಂದ ಶಾಲೆಗಳು ಮುಚ್ಚಿರುವ ಈ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಗ್ರಾಮೀಣ ಮಕ್ಕಳಲ್ಲಿ ಅಂತರ್ಜಾಲ ಶಿಕ್ಷಣದ ಮಹತ್ವವನ್ನು ತಿಳಿಸಲು ಮಾಡಿರುವ ಪ್ರಯತ್ನವೇ ಜ್ಞಾನ ತಾಣ ಎಂದು ಹೇಳಿದರು.
ಅಂತರ್ಜಾಲದಲ್ಲಿ ಅನೇಕ ಪ್ರಗತಿಯಾಗಿದ್ದು ದುರ್ಬಲ ವರ್ಗದ ಮಕ್ಕಳಿಗೆ ಈ ಸೌಲಭ್ಯ ಕನಸಿನ ಮಾತಾಗಿತ್ತು. ಇದನ್ನು ಮನಗಂಡ ಧರ್ಮಸ್ಥಳ ಸಂಸ್ಥೆ ೫ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಇಂಗ್ಲಿಷ್ ವಿಜ್ಞಾನ ಗಣಿತ ಪಠ್ಯಕ್ರಮದ ತಂತ್ರಾಂಶವನ್ನು ಜೋಡಿಸಲಾಗಿದ್ದು ೭೬ ಟ್ಯಾಬ್ ಗಳನ್ನು ಶೇ.೭೫ರಷ್ಟು ಸಹಾಯಧನ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ೧೦೦ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್‌ಗಳನ್ನು ಶೇ. ೫೦ರಷ್ಟು ಸಹಾಯಧನ ಮೂಲಕ ನೀಡುತ್ತಿರುವುದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಗಣೇಶ್‌ಮೂರ್ತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಜ್ಞಾನತಾಣ ಕಾರ್ಯಕ್ರಮ ಪೂಜ್ಯರ ಅಭಿಲಾಷೆಯಂತೆ ಪಾಲ್ಗೊಳ್ಳುವ ಕಾರ್ಯಕ್ರಮವಾಗಿದೆ. ಶಾಲೆಯಲ್ಲಿ ಕಲಿತಂತೆ ಮನೆಯಲ್ಲಿಯೂ ನಿಗದಿತ ಪಠ್ಯಗಳನ್ನು ಪ್ರತಿನಿತ್ಯ ಅಧ್ಯಯನ ಮಾಡುವಂತೆ ಮಾಡಿ ಮಾಸಿಕ ಪರೀಕ್ಷೆಗಳನ್ನು ಮಕ್ಕಳಿಗೆ ಮಾಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ವಲಯ ಅಧಿಕಾರಿ ಅನಿಲ್, ಮೇಲ್ವಿಚಾರಕರಾದ ಯಶೋಧ, ವಸಂತ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.