ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಜ್ಞಾನದ ಅವಶ್ಯಕತೆಯಿದೆ.

ಚಿತ್ರದುರ್ಗ.ಜೂ.೩ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಜ್ಞಾನದ ಅವಶ್ಯಕತೆಯಿದೆ. ಕೊರೋನ ವೈರಸ್ ಮಕ್ಕಳ ಕಲಿಕೆಗೆ ಕಡಿವಾಣ ಹಾಕಿರಬಹುದು ಆದರೆ ಅವರ ಉತ್ಸಾಹವನ್ನು ತಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶ್ರೀನಾಥ್ ಎಂ ಜೋಷಿ ಅಭಿಪ್ರಾಯ ಪಟ್ಟರು.
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಯೋಗೀಶ್ ಸಹ್ಯಾದ್ರಿ ಎಜುಕೇಶನ್ ಫೌಂಡೇಶನ್ ಮತ್ತು ಸುದ್ಧಿ ಒನ್ ನ್ಯೂಸ್ ಚಿತ್ರದುರ್ಗ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉಚಿತ ಆನ್‌ಲೈನ್‌ ಇಂಗ್ಲಿಷ್ ಕಾರ್ಯಾಗಾರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀನಾಥ್ ಎಂ ಜೋಷಿ, ಕೋವಿಡ್ ಸಂಕಷ್ಟದಲ್ಲಿ ಮಕ್ಕಳು ಶಾಲೆಗೆ ಹೋಗಲಾಗದೆ ನಿರಂತರ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ರೀತಿಯ ಕಾರ್ಯಾಗಾರಗಳು ಮಕ್ಕಳ ಜ್ಞಾನ ವಿಕಾಸಕ್ಕೆ ನೆರವಾಗುವಂತಹದು. ಎಲ್ಲರು ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗು ಶಿಕ್ಷಕ ಸಮೂಹ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಉಚಿತವಾಗಿ ಶಿಕ್ಷಣ ನೀಡಲು ಮುಂದಾಗಿರುವ ಯೋಗೀಶ್ ಸಹ್ಯಾದ್ರಿ ಅವರ ಕಾರ್ಯ ಶ್ಲಾಘನೀಯ. ಕಲಿಕೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಯ ವ್ಯಕ್ತಪಡಿಸಿದ ಅವರು ಜ್ಞಾನ ಯಾರ ಮನೆಯ ಸ್ವತ್ತಲ್ಲ, ಬದಲಾಗಿ ಅದನ್ನು ವಿದ್ಯೆ ಎಂಬ ತಪಸ್ಸಿನ ಮೂಲಕ ಪಡೆಯಬೇಕು ಎಂದು ಕಿವಿಮಾತು ಹೇಳಿದರು. ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿಯವರು, ಕಾರ್ಯಾಗಾರವು ಎರಡು ದಿನಗಳ ಕಾಲ ನಡೆಯಲಿದ್ದು, ರಾಜ್ಯದ ಎಲ್ಲ ಭಾಗಗಳಿಂದ ಸುಮಾರು 250 ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ. ಮಕ್ಕಳ ಇಂಗ್ಲಿಷ್ ಭಾಷಾ ಜ್ಞಾನ ಹಾಗು ಶೈಕ್ಷಣಿಕಅಭಿವೃದ್ಧಿಗಾಗಿ ಅತ್ಯಂತ ವಿಭಿನ್ನ ರೀತಿಯಲ್ಲಿ ಶಿಕ್ಷಕರಾದ ನಾವೆಲ್ಲರೂ ಯೋಚಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಜೊತೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಆಗ ಮಾತ್ರ ಮಕ್ಕಳ ಮನೋವಿಕಾಸ ಸಾಧ್ಯ ಎಂದು ತಿಳಿಸಿದ ಅವರು ಮನೆಯಲ್ಲಿಯೇ ಕುಳಿತು ಶಾಲಾ ಕಲಿಕೆಯ ಅನುಭವವನ್ನು ಈ ಕಾರ್ಯಾಗಾರದ ಮೂಲಕ ಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ನಿರಂತರ ಎರಡೂವರೆ ಗಂಟೆಯ ತನಕ ಇಂಗ್ಲಿಷ್ ಕುರಿತಾಗಿ ಮಕ್ಕಳ ಜೊತೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ಎನ್.ಅಶೋಕ್ ರವರು ಮಕ್ಕಳಿಗೆ ಭಾಷೆಗಳ ಕಲಿಕೆ ಅತ್ಯಂತ ಮಹತ್ವದ್ದು. ಈ ನಿಟ್ಟಿನಲ್ಲಿ ಆನ್‌ಲೈನ್ ಪಾಠದ ಮೂಲಕ ನಾಡಿನ ಆಸಕ್ತ ಮಕ್ಕಳಿಗೆ ಇಂಗ್ಲಿಷ್ ಭಾಷಾ ಕಲಿಕೆ ಕುರಿತಂತೆ ತಿಳಿಸಲು ಮುಂದಾಗಿರುವ ಚಿತ್ರದುರ್ಗ ಮಕ್ಕಳ ಸಾಹಿತ್ಯ ಪರಿಷತ್ತಿನ ಎಲ್ಲ ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಾರ್ಯ ಅಭಿನಂದನೀಯ. ಈ ದಿಸೆಯಲ್ಲಿ ಜಿಲ್ಲಾ ಮಸಾಪ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರ ನೇತೃತ್ವದಲ್ಲಿ ಪರಿಷತ್ತು ಬೆಳೆಯಲಿ ಹಾಗು ಇಂಥಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ. ಇವರ ಎಲ್ಲ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಕಲಿಕೆಯನ್ನು ಉತ್ತೇಜಿಸಬೇಕಿದೆ. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಘಟಕ ಇವರ ಎಲ್ಲ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ನುಡಿದರು.ಈ ವರ್ಚುವಲ್ ಕಾರ್ಯಕ್ರಮವನ್ನು ಆನ್‌ಲೈನ್ ಕಾರ್ಯಾಗಾರದಲ್ಲಿ ಹಿರಿಯೂರು ತಾಲೂಕು ಅಧ್ಯಕ್ಷ ಎಸ್. ಹೆಚ್.ಶಫೀಉಲ್ಲಾ, ಚಳ್ಳಕೆರೆ ತಾಲೂಕು ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ್,ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳ 250 ಕ್ಕು ಹೆಚ್ಚಿನ ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.