ಗ್ರಾಮೀಣ ಯುವಕರಿಗೆ ಪ್ರೋತ್ಸಾಹ ನೀಡಲು ಕ್ರಮ

ಸಂಜೆವಾಣಿ ವಾರ್ತೆ

ನಾಯಕನಹಟ್ಟಿ.ಜು.೪; ಕನ್ನಡ ಸಾಹಿತ್ಯ ಪರಿಷತ್‌ನಿಂದ ಹೋಬಳಿ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲೂ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ರಾಮಲಿಂಗಶೆಟ್ಟಿ ತಿಳಿಸಿದರು.ಕೂನಬೇವು ಗ್ರಾಮದಲ್ಲಿ  ಏರ್ಪಡಿಸಿದ್ದ ಟಿ.ಆರ್. ಅವಿನಾಶ್ ಅವರ ‘ತತ್ವ ಸಾರುವ ಪೈರು’ ಕವನ ಸಂಕಲನ ಬಿಡುಗಡೆ ಮತ್ತು ಹೋಬಳಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕನ್ನಡದ ಬಗ್ಗೆ ಒಲವು ಹೊಂದಿರುವ ಯುವಕರು ಹಾಗೂ ಹಿರಿಯರು ಅಪಾರಸಂಖ್ಯೆಯಲ್ಲಿದ್ದಾರೆ. ಅವರನ್ನು ಗುರುತಿಸಿ ಅವಕಾಶ, ವೇದಿಕೆ ಒದಗಿಸಲಾಗುವುದು ಎಂದರು.ತುರುವನೂರು ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಇದೇ ರೀತಿಯಲ್ಲಿ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕಗಳು ತಿಂಗಳಿಗೆ ಒಂದು ಕಾರ್ಯಕ್ರಮ ಆಯೋಜಿಸಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸಬೇಕು’ ಎಂದು ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಸಲಹೆ ನೀಡಿದರು.ತುರುವನೂರು ಹೋಬಳಿ ಅಧ್ಯಕ್ಷ ಎ.ಬಸಣ್ಣ, ಪದಾಧಿಕಾರಿಗಳಾದ ವೆಂಕಟೇಶ್‌, ಎಂ.ವಿಶ್ವನಾಥ್, ಮತ್ತು ತಿಪ್ಪೇಸ್ವಾಮಿ ಇದ್ದರು.