ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಅಗತ್ಯ

ಕೊರಟಗೆರೆ, ಜು. ೨೧- ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ತಾಂತ್ರಿಕ ತರಬೇತಿ ಶಿಕ್ಷಣವನ್ನು ಅಳವಡಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಮತ್ತು ಸ್ಪರ್ಧಾತ್ಮಕ ಬೋಧನೆ ನೀಡುವಂತಾಗಬೇಕು. ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಪಾಲಿಟೆಕ್‌ನಿಕ್ ಶಾಲೆಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.
ತಾಲ್ಲೂಕಿನ ಕಸಬಾ ಹೊಬಳಿಯ ಗೊರವನಹಳ್ಳಿ ಗ್ರಾಮದಲ್ಲಿ ಮಹಾಲಕ್ಷೀ ಚಾರಿಟಬಲ್ ಟ್ರಸ್ಟ್‌ನ ಶ್ರೀ ಮಹಾಲಕ್ಷ್ಮೀ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣ ಕಲಿಕೆಯಲ್ಲಿ ಅವಕಾಶ ವಂಚಿತರಾಗಬಾರದು ಎನ್ನುವುದು ಸರ್ಕಾರದ ಜನಪ್ರತಿನಿಧಿಗಳ ಉದ್ದೇಶವಾಗಿರಬೇಕು. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಪಟ್ಟಣದ ಶಾಲೆಗಳ ರೀತಿ ಎಲ್ಲ ಮೂಲಭೂತ ಸೌಕರ್ಯ ನೀಡಬೇಕು ಎಂದರು.
ಗ್ರಾಮಾಂತರ ವಿದ್ಯಾರ್ಥಿಗಳು ತಾಂತ್ರಿಕ ತರಬೇತಿ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವ ಸ್ಥಿತಿ ಇದೆ. ಇದಕ್ಕಾಗಿ ಅವರು ನಗರ ಪ್ರದೇಶದಲ್ಲಿ ವಸತಿ ಇಲ್ಲದೆ ಕಷ್ಟಪಡುತ್ತಿದ್ದು ಕಾಲೇಜಿಗೆ ಹೋಗಲು ದಿನವೂ ಪ್ರಯಾಣಕ್ಕೆ ತೊಂದರೆಪಡುತ್ತಿದ್ದಾರೆ. ಅದಕ್ಕಾಗಿ ತಾಂತ್ರಿಕ ವೃತ್ತಿಪರ ಶಿಕ್ಷಣವನ್ನು ಗ್ರಾಮಾಂತರ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಗೊರವನಹಳ್ಳಿಯ ಮಹಾಲಕ್ಷ್ಮಿಕಾಲೇಜಿನಲ್ಲಿ ನಿಂತು ಹೋಗಿರುವ ಪಾಲಿಟೆಕ್‌ನಿಕ್ ವೃತ್ತಿಪರ ಕೋರ್ಸ್‌ನ್ನು ಪುನಃ ಪ್ರಾರಂಭಿಸುವಂತೆ ಸಲಹೆ ನೀಡಿದರು.
ದೇಶದಲ್ಲಿ ಬಹುತೇಕ ಸಾಧಕರು ಉನ್ನತ ಹುದ್ದೆಯಲ್ಲಿ ಇರುವವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದಾರೆ. ನಾನು ಕೂಡಾ ತುಮಕೂರಿನ ಗೊಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನೆಲದ ಮೇಲೆ ಕುಳಿತು ಕಲಿತ ವಿದ್ಯಾರ್ಥಿಯಾಗಿದ್ದೆ. ನಂತರ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದು ಹೊರದೇಶದಲ್ಲಿ ಪಿಹೆಚ್‌ಡಿ ಮಾಡಿ ಪ್ರಸ್ತುತ ಸಾರ್ವಜನಿಕ ಬದುಕಿಗೆ ಬಂದು ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿ, ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಗೆ ಸಾಧನೆಗೆ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ನಿರ್ದೇಶಕರುಗಳಾದ ಶ್ರೀಪ್ರಸಾದ್, ನಟರಾಜು, ರವಿರಾಜಅರಸ್, ಮಂಜುನಾಥ್, ನರಸರಾಜಪ್ಪ, ದೇವಾಲಯದ ಇ.ಓ ಕೇಶವಮೂರ್ತಿ, ಶಾಲಾ ಮುಖ್ಯಶಿಕ್ಷಕ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್‌ನಾರಾಯಣ, ಅರಕೆರೆ ಶಂಕರ್, ಮುಖಂಡರಾದ ಮಂಜುನಾಥ್, ಮುರಳಿಧರ್, ಅರವಿಂದ್, ಕೆ.ಎಲ್.ಮಂಜುನಾಥ್ ಮತ್ತಿತರರು ಉಪ ಸ್ಥಿತರಿದ್ದರು.