ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರವಾದ ಪಟ್ಟದ್ದೇವರ ಶೈಕ್ಷಣಿಕ ಕ್ರಾಂತಿ:ಹೊರಟ್ಟಿ

ಭಾಲ್ಕಿ:ಜು.21:ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಿ ಹಳ್ಳಿ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಶ್ರಮಿಸುತ್ತಿರುವ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ ಕ್ರಾಂತಿ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರವಾಗಿದೆ ಎಂದು
ಮಾಜಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಬೆಂಗಳೂರಿನ ಅವರ ಸ್ವಗೃಹದಲ್ಲಿ ಸತತವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಇಳಕಲ್ಲ-ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಷ್ಟ್ರಮಟ್ಟದ ನೀಟ್, ಐಐಟಿ, ಜೆಇಇ, ಕೆವಿಪಿವೈ ಸೇರಿದಂತೆ ಇತರ ಪರೀಕ್ಷೆ ಗಳಲ್ಲಿ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿ, ಉತ್ಕøಷ್ಟ ದರ್ಜೆಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವನಾಗಿ ಕಾರ್ಯ ನಿರ್ವಹಿಸಿರುವುದರಿಂದ ಶಿಕ್ಷಣದ ಬಗ್ಗೆ ಅತೀವ ಆಸಕ್ತಿ ಇದೆ. ಶೀಘ್ರದಲ್ಲಿ ಬಸವಕಲ್ಯಾಣದ ಅನುಭವ ಮಂಟಪ, ಚನ್ನಬಸವೇಶ್ವರ ಗುರುಕುಲ, ಹಿರೇಮಠಕ್ಕೆ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.

ಇಳಕಲ್ಲ-ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ, ಹಿರೇಮಠ ಸಂಸ್ಥಾನ ವಿದ್ಯಾಪೀಠದ ನಿರ್ದೇಶಕ ಶಶಿಧರ ಕೋಸಂಬೆ, ಇಳಕಲ್ಲದ ಪ್ರಮುಖ ಗಿರಿಗೌಡರ್ ಇದ್ದರು.