ಗ್ರಾಮೀಣ ಭಾಗದ ಯುವಕರು ದೇಶದ ಶಕ್ತಿ

ಗೌರಿಬಿದನೂರು, ನ ೯- ಗ್ರಾಮೀಣ ಭಾಗದ ಯುವಕರು ದೇಶದ ಶಕ್ತಿಯಾಗಿದ್ದು, ಅವರಲ್ಲಿರುವ ಕ್ರೀಡಾ ಮನೋಭಾವವನ್ನು ಪ್ರೋತ್ಸಾಹಿಸಿ ಸ್ಫೂರ್ತಿ ನೀಡಿದಲ್ಲಿ ರಾಷ್ಟ್ರದ ಏಳಿಗೆಗೆ ಕೈಜೋಡಿಸಿದಂತಾಗುತ್ತದೆ ಎಂದು ಜಿ.ಪಂ ಸದಸ್ಯ ಡಾ.ಕೆ.ಕೆಂಪರಾಜು ತಿಳಿಸಿದರು.
ನಗರದ ಹೊರವಲಯದಲ್ಲಿ ಯುವ ಕ್ರೀಡಾಪಟುಗಳಿಗೆ ಆಯೋಜಿಸಿದ್ದ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಲ್ಲಿ ತನ್ನದೇ ಶಕ್ತಿ ಅಡಗಿರುತ್ತದೆ. ಸ್ಥಳೀಯವಾಗಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಯುವಕಲ್ಲಿ ಕ್ರೀಡಾ ಶಕ್ತಿಯನ್ನು ಉತ್ತೇಜಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತೇವೆ. ಪ್ರತೀ ಗ್ರಾಮದಲ್ಲಿನ ಯುವಕರಲ್ಲಿ ಸ್ಫೂರ್ತಿದಾಯಕ ನಾಯಕತ್ವದ ಚಿಲುಮೆ ಪುಟಿದೇಳಬೇಕಾಗಿದೆ. ಇದರಿಂದ ಭವಿಷ್ಯದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಬೆಳೆಯಬೇಕಾಗಿದೆ. ಇದಕ್ಕಾಗಿ ಸದಾ ನಮ್ಮ ಸಹಕಾರ ಇರುತ್ತದೆ.
ಮುಂಬರುವ ಸ್ಥಳೀಯ ಗ್ರಾ.ಪಂ ಚುನಾವಣೆಗಳಲ್ಲಿ ತಾವುಗಳು ಮುಂದಾಳತ್ವ ವಹಿಸಿ ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಗುರ್ತಿಸಿ ಪ್ರೋತ್ಸಾಹ ನೀಡಬೇಕಾಗಿದೆ.
ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ನಾಯಕತ್ವದ ಜತೆಗೆ ಸ್ಥಳೀಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಯುವಕರು ಯಾವುದೇ ರಾಜಕೀಯ ಪ್ರೇರಿತ ಷಡ್ಯಂತ್ರಗಳಿಗೆ ಕಿವಿಗೊಡದೆ ಧೈರ್ಯದಿಂದ ಕಾರ್ಯನಿರ್ವಹಿಸಿ, ನಿಮ್ಮೊಂದಿಗಿದ್ದು ಸದಾ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.
ದೈಹಿಕ ಶಿಕ್ಷಕ ವೈ.ಕೆ.ಪ್ರಕಾಶ್ ಮಾತನಾಡಿ, ತಾಲ್ಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನ ಕಬಡ್ಡಿ ಮತ್ತು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸಿದ ಡಾ.ಕೆ.ಕೆಂಪರಾಜು ರವರ ಕಾರ್ಯ ಶ್ಲಾಘನೀಯವಾದುದು. ಇದರಿಂದ ಸಾಕಷ್ಟು ಮಂದಿಯಲ್ಲಿ ಎಲೆಮರೆ ಕಾಯಿಯಂತೆ ಅಡಗಿದ್ದ ಕ್ರೀಡಾಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸಿ ಅವರ ಭವಿಷ್ಯಕ್ಕೆ ಭದ್ರತೆ ನೀಡಿದಂತಾಗಿದೆ.
ಇಂತಹ ಮಹತ್ಕಾರ್ಯಕ್ಕೆ ಸಹಕಾರ ನೀಡಿ ಯುವಕರ ಬದುಕಿಗೆ ಆಸರೆಯಾದ ಡಾ.ಕೆ.ಕೆಂಪರಾಜು ರವರು ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಉತ್ತಮ ಕ್ರೀಡಾಪಟುಗಳನ್ನು ಹಾಗೂ ತಂಡದ ನಾಯಕರನ್ನು ವೇದಿಕೆಯಲ್ಲಿ ಅಭಿನಂಧಿಸಲಾಯಿತು.
ಇದೇ ವೇಳೆ ಮುಖಂಡರಾದ ಮುದುಗೆರೆ ರಾಜಶೇಖರ್, ನರಸಿಂಹಯ್ಯ, ಗಂಗಾಧರಪ್ಪ, ಸುನಿಲ್, ಮಲ್ಲಿಕಾರ್ಜುನ, ರಂಗನಾಥಗೌಡ, ಲಕ್ಷ್ಮಿಕಾಂತ್, ನಂಜುಂಡಪ್ಪ, ಶ್ರೀಕಾಂತ್, ಗೌಸ್ ಪೀರ್, ಸತ್ಯನಾರಾಯಣ, ಜಗದೀಶ್, ಶಬ್ಬೀರ್ ಇತರರು ಭಾಗವಹಿಸಿದ್ದರು.