ಗ್ರಾಮೀಣ ಭಾಗದ ಯುವಕರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿ:ಅಪರ ಜಿಲ್ಲಾಧಿಕಾರಿ

ಬಳ್ಳಾರಿ,ಅ.29: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯುವಕರಿಗೆ ತಿಳಿಸಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡಬೇಕು ಮತ್ತು ಗ್ರಾಮೀಣ ಭಾಗದ ಯುವಕರನ್ನು ವಿವಿಧ ಅಭಿಯಾನ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು ಹಾಗೂ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೂಚನೆ ನೀಡಿದರು.
ನೆಹರು ಯುವ ಕೇಂದ್ರದ ಯುವ ಕಾರ್ಯಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳು ಮತ್ತು ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಕೊರೊನಾ ವೈರಸ್ ಕುರಿತು ಜನರು ಇತ್ತೀಚೆಗೆ ನಿರ್ಲಕ್ಷ್ಯಭಾವನೆ ತಳೆಯುತ್ತಿದ್ದು,ಅವರಿಗೆ ಮಾಸ್ಕ್ ಧರಿಸುವಿಕೆ,ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ರಾಷ್ಟ್ರದ ಯುವಜನತೆಯಲ್ಲಿ ಸಕರಾತ್ಮಕ ಚಿಂತನೆ, ರಾಷ್ಟ್ರ ನಿರ್ಮಾಣ, ವ್ಯಕ್ತಿತ್ವ ವಿಕಸನದಂತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ನೆಹರು ಯುವಕೇಂದ್ರದ ಸದಸ್ಯರ ಕಾರ್ಯ ಶ್ಲಾಘನೀಯವಾಗಿದ್ದು,ಇದೇ ರೀತಿ ಮುಂದುವರಿಸಿಕೊಂಡು ಹೋಗಬೇಕು ಎಂದು ಸೂಚಿಸಿದರು.
ಈ ಸಭೆಯಲ್ಲಿ 2020-21ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ಹಾಗೂ ಇತರೆ ಸಲಹಾ ಮಾರ್ಗ ಸೂಚನೆಗಳ ಬಗ್ಗೆ ಚರ್ಚಿಸಲಾಯಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾಂಟು ಪತ್ತರ್ ಅವರು ಯುವ ಕೇಂದ್ರದ 2020-21ನೇ ಸಾಲೀನ ವಾರ್ಷಿಕ ಕ್ರಿಯಾಯೋಜನೆಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಜಿಲ್ಲೆಯಾದ್ಯಂತ ಹಲವು ತಾಲ್ಲೂಕುಗಳಲ್ಲಿ ವಿವಿಧ ಯೋಜನೆಗಳಿಗೆ ಅರ್ಹ ಯುವಕರನ್ನು ಗುರುತಿಸಿ ಅವರ ಕೌಶಲ್ಯಗೆ ತಕ್ಕಂತೆ ಅಗತ್ಯ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಮೇಶ್ ಕೊನರೆಡ್ಡಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ಹರಿಸಿಂಗ್ ರಾಥೋಡ್, ರೆಡ್‍ಕ್ರಾಸ್‍ನ ಕಾರ್ಯದರ್ಶಿ ಎಂ.ಎ.ಷಕೀಬ್, ಲೀಡ್ ಬ್ಯಾಂಕಿನ ಅಧಿಕಾರಿ ವಿ.ಟಿ.ನಾಗೇಶ್, ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.