ಗ್ರಾಮೀಣ ಭಾಗದ ಜನರ ಸಮಸ್ಯೆ ಬಗೆಹರಿಸಿ

ಹುಮನಾಬಾದ್ :ಜ.22: ಗ್ರಾಮೀಣ ಭಾಗದ ಹಳ್ಳಿಗಳ ಜನಸಾಮಾನ್ಯರಿಗಾಗಿ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಸರಕಾರಿ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಹೇಳಿದರು.

ತಾಲೂಕಿನ ಸಿಂಧನಕೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತ ವತಿತಯಿಂದ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರನ್ನು ಕಚೇರಿಗೆ ಸುತ್ತಾಡಿಸದೇ ಸರಕಾರದ ನಿರ್ದೇಶನದಂತೆ ತಾಲೂಕ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆ ಸಂಬಧಿಸಿದ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ತ್ವರಿತಗತಿಯಲ್ಲಿ ಬಗೆಹರಿಸುವ ಪ್ರಯತ್ನ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಗೆ ಸಂಬಧಿಸಿದತೆ 58 ಅರ್ಜಿ ಸಲ್ಲಿಕೆಯಾದ್ದವು ಅದರಲ್ಲಿ 44 ವಿಲೇವಾರಿ ಮಾಡಲಾಗಿದೆ. 14 ಬಾಕಿ ಉಳಿದುಕೊಂಡಿವೆ. ಶಿಕ್ಷಣ, ಸಾರಿಗೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ 9 ಅರ್ಜಿ ಸಲ್ಲಿಕೆಯಾಗಿದ್ದು ಅದರಲ್ಲಿ 3 ವಿಲೇವಾರಿ ಮಾಡಲಾಗಿದೆ. 6 ಬಾಕಿ ಉಳಿದು ಕೊಂಡಿವೆ. ಹೀಗಾಗಿ ಒಟ್ಟು ಬಾಕಿ ಉಳಿದ 20 ಅರ್ಜಿಗಳ ಕುರಿತು ಸಂಬಧಿಸಿದ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಲಾಗುವುದು ಎಂದು ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ನೀಲಾವತಿ ಶೀಲವಂತ, ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ, ಡಾ. ಗೋವಿಂದ, ಶಿವಪ್ರಕಾಶ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.