ಗ್ರಾಮೀಣ ಭಾಗದ ಜನರಿಗೆ ಕೂಲಿಕಾರರಿಗೆ ಕೂಸಿನ ಮನೆ ಅನುಕೂಲ : ಮ್ಯಾಗೇರಿ

ವಿಜಯಪುರ,ಮೇ.16:ಜಿಲ್ಲೆಯ ತಿಕೋಟಾ ತಾಲೂಕು ವ್ಯಾಪ್ತಿಯ ಲೋಹಗಾಂವ, ಬಾಬಾನಗರ, ಕನಮಡಿ ಮತ್ತು ಹೊನವಾಡ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾದ ಕೂಸಿನ ಮನೆಗಳಿಗೆ ನೂಡಲ್ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ವಿಜಯಪುರ ಗ್ರಾಮೀಣ) ಎಸ್.ಸಿ. ಮ್ಯಾಗೇರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನಂತರ ಮಾತನಾಡಿದ ಎಸ್.ಸಿ. ಮ್ಯಾಗೇರಿ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾದ ಕೂಸಿನ ಮನೆಗಳು ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿವೆ. ಗ್ರಾಮೀಣ ಭಾಗದ ಜನರು ತಮ್ಮ 03 ವರ್ಷದೊಳಗಿನ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ನಿಶ್ಚಿಂತೆಯಿಂದ ಕೂಲಿ ಕೆಲಸಕ್ಕೆ ತೆರಳಲು ಈ ಕೇಂದ್ರಗಳು ಸಹಕಾರಿಯಾಗಿವೆ. ಈ ಕೇಂದ್ರದಲ್ಲಿ ಮಕ್ಕಳಿಗೆ ಆಟ ಪಾಠದ ಜೊತೆಗೆ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ ಎಂದರು.
ತಿಕೋಟಾ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಗ್ರಾಉ ಮತ್ತು ಪಂರಾ) ಶೋಭಕ್ಕ ಶಿಳೀನ ಅವರು ಮಾತನಾಡಿ, ತಿಕೋಟಾ ತಾಲೂಕಿನಾದ್ಯಂತ 10 ಕೂಸಿನ ಮನೆಗಳು ಮಂಜೂರಾಗಿದ್ದು ಸರಕಾರದ ನಿರ್ದೇಶನದಂತೆ ಎಲ್ಲಾ ಕೇಂದ್ರಗಳನ್ನು ಆರಂಭ ಮಾಡಲಾಗಿದೆ. ಮತ್ತು ಕೇಂದ್ರದ ಆರೈಕೆದಾರರು ಸಮೀಕ್ಷೆ ಮಾಡಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಈ ಕೇಂದ್ರಗಳಲ್ಲಿ ದಾಖಲು ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವ್ಹಿ.ಕೆ. ಹೊಸಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಕಳ್ಳಿಮನಿ, ಪದ್ಮಿನಿ ಬಿರಾದಾರ, ರೇಣುಕಾ ಸೋಲಾಪುರ, ಮಹೇಶ ಕಗ್ಗೊಡದವರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಕೂಸಿನ ಮನೆ ಆರೈಕೆದಾರರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೇರಿ ಇತರರು ಇದ್ದರು.