
ಅಫಜಲಪುರ:ಆ.15: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿವಹಿಸಿ ಗ್ರಾಮೀಣ ಭಾಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮುಖ್ಯಗುರು ಶಂಕ್ರಯ್ಯ ಹಿರೇಮಠ ತಿಳಿಸಿದರು.
ತಾಲೂಕಿನ ಚಿಂಚೋಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಮಾಜ ವಿಜ್ನಾನ ವಿಷಯದಲ್ಲಿ 100 ಕ್ಕೆ ಶೇ. 100 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿನಿ ರೇಣುಕಾ ಎಂ. ಕೊಳ್ಳಿ ಅವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ಮಕ್ಕಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಜೀವನದಲ್ಲಿ ಏನನ್ನಾದರು ಸಾಧಿಸಬೇಕಾದರೆ ಸ್ಪಷ್ಟ ನಿಲುವು ಮತ್ತು ಗುರಿ ಹೊಂದಬೇಕು. ಹೀಗಾಗಿ ಅಂದಿನ ಪಾಠವನ್ನು ಅಂದಿನ ದಿನವೇ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಗ್ರಾಮದ ಕೀರ್ತಿಯನ್ನು ಬೆಳಗಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿನಿ ಕು. ರೇಣುಕಾ ಎಂ. ಕೊಳ್ಳಿ ಮಾತನಾಡಿ ನಮಗೆ ಶಿಕ್ಷಕರು ಉತ್ತಮ ಬೋಧನೆ ಹಾಗೂ ಮಾರ್ಗದರ್ಶನ ನೀಡಿದರ ಫಲವಾಗಿ ನಾನು ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ಹೀಗಾಗಿ ನನಗೆ ಕಲಿಸಿದ ಗುರುಗಳಿಗೆ ನಾನು ಎಂದಿಗೂ ಚಿರಋಣಿ ಎಂದರು.
ಈ ವೇಳೆ ಶಿಕ್ಷಕರಾದ ಗೌತಮ ಕಳಸನ್, ವಿಶ್ವನಾಥ ವಾಲಿ ಸೇರಿದಂತೆ ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.