
ಭಾಲ್ಕಿ:ಜ.3: ಗ್ರಾಮ ಪಂಚಾಯಿತಿಗಳಲ್ಲಿ ನಾನಾ ಯೋಜನೆಯಡಿ ಅನುದಾನದ ಲಭ್ಯತೆ ಇದ್ದು, ಸದಸ್ಯರು ಅನುದಾನದ ಸದ್ಬಳಕೆ ಮಾಡಿಕೊಂಡು ಪಂಚಾಯಿತಿ ಮಟ್ಟದಲ್ಲಿ ಉತ್ತಮ ಕೆಲಸ ಮಾಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಪ್ರಯಾಗ ಫಂಕ್ಷನ್ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ.80 ರಷ್ಟು ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿರುವುದು ಹರ್ಷ ತರಿಸಿದೆ. ಇದು ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಗೆಲುವು ಆಗಿದೆ.
ಗೆಲುವು ಸಾಧಿಸಿದ ಎಲ್ಲ ಸದಸ್ಯರು ಪಂಚಾಯಿತಿ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿ ಯೋಜನಾ ಬದ್ಧವಾಗಿ ಕೆಲಸ ಮಾಡಿ ಪಕ್ಷ, ಗ್ರಾಮಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು. ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕು. ಬರುವ ಚುನಾವಣೆಗೂ ಸನ್ನದ್ಧರಾಗಬೇಕು ಎಂದರು.
ಅಧ್ಯಕ್ಷ ಸ್ಥಾನಗಳಿಗೆ ಕೆಲ ದಿನಗಳಲ್ಲಿ ಮೀಸಲಾತಿ ಬರಲಿದೆ. ವಿರೋಧಿಗಳು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್ ಬೆಂಬಲಿತರು ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ, ಜಿಪಂ ಸದಸ್ಯ ಅಂಬಾದಾದ ಕೊರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ದೇಶಮುಖ ಸೇರಿದಂತೆ ಹಲವರು ಇದ್ದರು.