ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ಹಾವಳಿ


ದೇವದುರ್ಗ.ನ.೨- ಸತತ ಮಳೆ ಹಾಗೂ ಭತ್ತದ ಗದ್ದೆಯಿಂದ ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಜನ ಜಾನುವಾರು ತತ್ತರಿಸಿವೆ. ತಾಲೂಕು ಬಹುತೇಕ ನೀರಾವರಿ ಪ್ರದೇಶವಾಗಿದ್ದರಿಂದ ಎಲ್ಲೆಂದರಲ್ಲಿ ನಾಲೆ, ಚರಂಡಿ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿದೆ. ಭತ್ತದ ನಾಟಿಯಾಗಿದ್ದು, ಹೊಲದಲ್ಲಿರುವ ದ್ವಾಮೆಗಳು(ಭತ್ತ ಕಡಿಯುವ ಕೀಟ) ಹಳ್ಳಿಗಳಿಗೆ ಲಗ್ಗೆ ಹಾಕಿ ಜನ, ಜಾನುವಾರು ರಕ್ತ ಕುಡಿಯುತ್ತಿವೆ.
ಸಂಜೆಯಾದರೆ ಸಾಕು ಜನರು ನೆಮ್ಮದಿಯಿಂದ ಕೂರುವಂತಿಲ್ಲ. ಜಾನುವಾರುಗಳ ಮೂಕವೇದನೆ ರೈತರ ಹೊರತು ಇನ್ಯಾರಿಗೂ ಅರ್ಥವಾಗುತ್ತಿಲ್ಲ. ಜೇನುನೊಣಗಳಂತೆ ಕರು, ಎಮ್ಮ, ಎತ್ತು, ಆಕಳಿಗೆ ದಾಳಿ ಮಾಡುವ ದ್ವಾಮೆಗಳು ರಾತ್ರಿಯಿಡಿ ರಕ್ತ ಹೀರುತ್ತಿವೆ. ದ್ವಾಮಿಗಳ ಕಡಿತದಿಂದ ವಿಪರೀತ ತುರಿಕೆ, ಗುಳ್ಳೆಗಳು ಆಗುತ್ತಿವೆ. ಇದರಿಂದ ಮಲೇರಿಯಾ, ಚಿಕ್ಯೂನ್‌ಗುನ್ಯಾ, ಶಂಕಿತ ಡೆಂಘೆ ಹೆಚ್ಚುತ್ತಿದೆ.
ಗುಡ್ಡಗಾಡು, ನಾಲೆ ನೀರು ಅಧಿಕ ಪ್ರಮಾಣದಲ್ಲಿರುವ ಬಿ.ಗಣೇಕಲ್, ಗಲಗ, ಮುಂಡರಗಿ, ಗಾಣಧಾಳ, ಪಲಕನಮರಡಿ, ಅರಕೇರಾ, ಜಾಲಹಳ್ಳಿ, ಚಿಂಚೋಡಿ ಸೇರಿ ನದಿದಂಡೆ ಗ್ರಾಮಗಳಲ್ಲೂ ಸೊಳ್ಳೆಗಳು ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ನೆಮ್ಮದಿ ಕಸಿದ ಗಲಗ, ಗಾಣಧಾಳ, ಮುಂಡರಗಿ, ಬಿ.ಗಣೇಕಲ್‌ನಲಗಲಿ ಹತ್ತಾರು ಜನರು ಮಲೇರಿಯಾ, ಚಿಕ್ಯೂನ್‌ಗುನ್ಯಾಕ್ಕೆ ತುತ್ತಾಗಿದ್ದಾರೆ. ಈ ಭಾಗದಲ್ಲಿ ಜನರ ಆರೋಗ್ಯ ಕಾಪಾಡುವುದು ವೈದ್ಯರಿಗೆ ಸವಾಲ್ ಆಗಿದೆ. ಇಲ್ಲಿ ನಿತ್ಯುವೂ ಫಾಗಿಂಗ್ ಮಾಡಿದರೂ ಕಡಿಮೆ ಎನ್ನುತ್ತಾರೆ ಗ್ರಾಮಸ್ಥರು.
ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದರೂ ಅವುಗಳನ್ನು ನಿಯಂತ್ರಿಸಲು ಗ್ರಾಪಂಯಲ್ಲಿ ಫಾಗಿಂಗ್ ಯಂತ್ರಗಳ ಕೊರತೆಯಿದೆ. ತಾಲೂಕಿನಲ್ಲಿ ೩೩ಗ್ರಾಪಂಗಳಿದ್ದು, ಬೆರೆಳೆಣಿಕೆಯಷ್ಟು ಫಾಗಿಂಗ್ ಯಂತ್ರಗಳಿವೆ. ಗ್ರಾಪಂ ದುಃಸ್ಥಿತಿ ನೋಡಿ ಆರೋಗ್ಯ ಇಲಾಖೆ ೨ಫಾಗಿಂಗ್ ಯಂತ್ರಗಳನ್ನು ನೀಡಿದೆ. ಚರಂಡಿ ಕೊರತೆಯಿಂದ ರಸ್ತೆ, ಖಾಲಿ ಜಾಗದಲ್ಲಿ ನೀರು ನಿಂತು ದುರ್ನಾತ ಜತೆಗೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಿದೆ. ರಾತ್ರಿಯಾದರೆ ಸಾಕು ಜನರು ಬಾಗಿದುಮುಚ್ಚಿ ಸೊಳ್ಳೆ ಪರದಿಯಲ್ಲಿ ಅಡಗಿಕೊಳ್ಳುವ ಸ್ಥಿತಿ ಇದೆ. ಇನ್ನು ದನಕರುಗಳು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ.
ಕೋಟ್========
ಅತಿಯಾದ ಮಳೆ ಹಾಗೂ ಭತ್ತದ ಗದ್ದೆಗಳಿಂದ ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಎಲ್ಲ ಕಡೆ ಫಾಗಿಂಗ್ ಮಾಡುವಂತೆ ಹೀಗಾಗಲೇ ಗ್ರಾಪಂ ಪಿಡಿಒಗಳಿಗೆ ಸೂಚಿಸಿದ್ದೇನೆ. ಶೀಘ್ರದಲ್ಲಿ ಪಿಡಿಒಗಳ ಸಭೆ ಕರೆದು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸೂಚಿಸುತ್ತೇನೆ.
ಪಂಪಾಪತಿ ಹಿರೇಮಠ
ತಾಪಂ ಇಒ